ಚಿದಂಬರಂ ದೇವಸ್ಥಾನದ 2,000 ಎಕರೆ ಭೂಮಿ ಗುಳುಂ.. ದೀಕ್ಷಿತರು ಮಾರಾಟ ಮಾಡಿರುವ ಆರೋಪ; ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್! » Dynamic Leader
November 7, 2024
ದೇಶ

ಚಿದಂಬರಂ ದೇವಸ್ಥಾನದ 2,000 ಎಕರೆ ಭೂಮಿ ಗುಳುಂ.. ದೀಕ್ಷಿತರು ಮಾರಾಟ ಮಾಡಿರುವ ಆರೋಪ; ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್!

ಡಿ.ಸಿ.ಪ್ರಕಾಶ್

ಚಿದಂಬರಂ ನಟರಾಜ ದೇಗುಲಕ್ಕೆ ಸೇರಿದ 2 ಸಾವಿರ ಎಕರೆ ಭೂಮಿಯನ್ನು ದೇವಸ್ಥಾನದ ದೀಕ್ಷಿತರು ಮಾರಾಟ ಮಾಡಿದ್ದಾರೆ ಎಂದು ಮುಜರಾಯಿ ಇಲಾಖೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ವಿವರಗಳನ್ನು ವರದಿಯಾಗಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಚಿದಂಬರಂ ನಟರಾಜ ದೇವಸ್ಥಾನವು 2008 ರಿಂದ 2014 ರವರೆಗೆ ಮುಜರಾಯಿ ಇಲಾಖೆಯ ನಿಯಂತ್ರಣದಲ್ಲಿದ್ದಾಗ ವಾರ್ಷಿಕ ರೂ.3 ಕೋಟಿಗೂ ಹೆಚ್ಚು ಆದಾಯ ಗಳಿಸಿತ್ತು. ದೀಕ್ಷಿತರ ಹಿಡಿತಕ್ಕೆ ಬಂದ ನಂತರ ವಾರ್ಷಿಕ ಕೇವಲ 2 ಲಕ್ಷ ರೂ.ಗಳು ಮಾತ್ರ ಆದಾಯ ಬರುತ್ತಿರುವುದರಿಂದ ದೇವಸ್ಥಾನದ ಆಯವ್ಯಯವನ್ನು ಸಲ್ಲಿಸಲು ಆದೇಶ ನೀಡುವಂತೆ ಮುಜರಾಯಿ ಇಲಾಖೆ ಆಯುಕ್ತರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವು ನ್ಯಾಯಾಧೀಶರಾದ ಆರ್.ಸುರೇಶ್ ಕುಮಾರ್, ಎಸ್.ಸೌಂದರ್ ಅವರನ್ನೊಳಗೊಂಡ ಪೀಠದಲ್ಲಿ ಗುರುವಾರ ಮತ್ತೆ ವಿಚಾರಣೆಗೆ ಬಂದಿತ್ತು.

ಆಗ, ಸಾಮಾನ್ಯ ದೀಕ್ಷಿತರ ಕಡೆಯಿಂದ, ದೇವಸ್ಥಾನದ ಲೆಕ್ಕಪರಿಶೋಧಕ ಬಜೆಟ್‌ನ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಯಿತು. ಅಲ್ಲದೆ, “ದೇವಸ್ಥಾನಕ್ಕೆ ಸೇರಿದ ಸಾವಿರ ಎಕರೆ ಭೂಮಿಯನ್ನು ಮುಜರಾಯಿ ಇಲಾಖೆಯ ಜಿಲ್ಲಾಧಿಕಾರಿ ನಿರ್ವಹಣೆ ಮಾಡುತ್ತಿದ್ದಾರೆ. ಆ ಜಮೀನಿನಿಂದ ಬಾಡಿಗೆ ಆದಾಯವಾಗಿ ಕೇವಲ ರೂ.93 ಸಾವಿರ ಮಾತ್ರ ಸಿಗುತ್ತದೆ. ರಾಜರು ಮತ್ತು ದಾನಿಗಳು ನಟರಾಜ ದೇವಸ್ಥಾನಕ್ಕೆ ಸುಮಾರು ಮೂರು ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದು, ಈಗ ಕೇವಲ ಒಂದು ಸಾವಿರ ಎಕರೆ ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಆ ನಿಟ್ಟಿನಲ್ಲಿಯೂ ವರದಿ ಸಲ್ಲಿಸಲು ಆದೇಶಿಸಬೇಕು.

ಅದೇ ರೀತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಅರ್ಪಿಸುವ ಕಾಣಿಕೆಯನ್ನು ದೀಕ್ಷಿತರು ತೆಗೆದುಕೊಂಡು ಹೋದರೂ ಅಗತ್ಯ ಬಿದ್ದರೆ ದೇವಸ್ಥಾನ ಆಡಳಿತ ಮಂಡಳಿಗೆ ಕಾಣಿಕೆ ಮೊತ್ತದಲ್ಲಿ ಭಾಗವನ್ನೂ ನೀಡಲಾಗುತ್ತದೆ. ದೇಣಿಗೆಯ ಆದಾಯ ಮತ್ತು ವೆಚ್ಚದ ಖಾತೆಯನ್ನು ನಿರ್ವಹಿಸಲು ನಾವು ಪ್ರತ್ಯೇಕ ಯೋಜನೆಯನ್ನು ಸಿದ್ಧಪಡಿಸಲು ಸಿದ್ಧರಿದ್ದೇವೆ” ಎಂದು ಹೇಳಲಾಯಿತು. ಆಗ ಮುಜರಾಯಿ ಇಲಾಖೆ ವತಿಯಿಂದ, “ಚಿದಂಬರ ನಟರಾಜ ದೇವಸ್ಥಾನಕ್ಕೆ 3 ಸಾವಿರ ಎಕರೆ ಜಮೀನಿದ್ದು, ಅದರಲ್ಲಿ 2 ಸಾವಿರ ಎಕರೆ ಜಮೀನನ್ನು ದೇವಸ್ಥಾನದ ದೀಕ್ಷಿತರು ತಮ್ಮ ಇಚ್ಛೆಯಂತೆ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಲಾಯಿತು.

“ಎರಡೂ ಕಡೆಯ ವಾದಗಳಿಂದ ತಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ” ಎಂದು ಹೇಳಿದ ನ್ಯಾಯಾಧೀಶರು, ಕಳೆದ 2017-18 ರಿಂದ 2021-22ರ ಅವಧಿಯ ವರೆಗಿನ ಲೆಕ್ಕಪತ್ರಗಳನ್ನು ಸಲ್ಲಿಸುವಂತೆ ದೀಕ್ಷಿತರ ಕಡೆಯವರಿಗೆ ಸೂಚಿಸಿದರು. ಅಲ್ಲದೆ, ಭಕ್ತಾದಿಗಳಿಂದ ಬರುವ ಕಾಣಿಕೆ ಮತ್ತು ವೆಚ್ಚಗಳ ಕುರಿತು ಲೆಕ್ಕ ಇಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿ; ಅದರ ಕರಡು ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಧೀಶರು ದೀಕ್ಷಿತರ ಕಡೆಯವರಿಗೆ ಆದೇಶಿಸಿದರು.

ಪ್ರಸ್ತುತ ದೇವಸ್ಥಾನ ಎಷ್ಟು ಎಕರೆ ಜಮೀನು ಹೊಂದಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಹಾಗೆಯೇ ದೇವಸ್ಥಾನಕ್ಕೆ ಸೇರಿದ 2,000 ಎಕರೆ ಜಮೀನನ್ನು ದೇವಸ್ಥಾನ ದೀಕ್ಷಿತರು ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ಮುಜರಾಯಿ ಇಲಾಖೆಗೆ ಆದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದ್ದಾರೆ.

Related Posts