ದಲಿತರು ಇಸ್ಲಾಂ - ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೂ ಅವರ 'ಪರಿಶಿಷ್ಟ ಜಾತಿ' ಮೀಸಲಾತಿ ಸೌಲಭ್ಯವನ್ನು ಮುಂದುವರಿಸಿ - ಡಿ.ಸಿ.ಪ್ರಕಾಶ್ » Dynamic Leader
September 10, 2024
ರಾಜಕೀಯ

ದಲಿತರು ಇಸ್ಲಾಂ – ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೂ ಅವರ ‘ಪರಿಶಿಷ್ಟ ಜಾತಿ’ ಮೀಸಲಾತಿ ಸೌಲಭ್ಯವನ್ನು ಮುಂದುವರಿಸಿ – ಡಿ.ಸಿ.ಪ್ರಕಾಶ್

ಡಿ.ಸಿ.ಪ್ರಕಾಶ್

ಬೆಂಗಳೂರು: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬಾರದೆಂದು ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ವಿಚಾರಣಾ ಆಯೋಗದ ಮುಂದೆ ಮನವಿ ಸಲ್ಲಿಸಲು ರಾಜ್ಯದ ದಲಿತ ಸಂಘಟನೆಗಳು ಮುಂದಾಗಿವೆ ಎಂದು ಇಂದು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ವರದಿಯಾಗಿದೆ.

ದಲಿತರು ಇಸ್ಲಾಂ-ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಅವರು ಇನ್ನೂ ದಲಿತರಾಗಿಯೇ ಕಾಲೋನಿಗಳಲ್ಲಿ, ಕೇರಿಗಳಲ್ಲಿ, ಹಟ್ಟಿಗಳಲ್ಲಿ, ಕೊಳಗೇರಿ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಅದುಮಾತ್ರವಲ್ಲ, ಇನ್ನೂ ಅವರೆಲ್ಲರೂ ಅಸ್ಪೃಶ್ಯರಾಗಿ ಬಡತನದಲ್ಲೇ ಉಳಿದಿದ್ದಾರೆ ಎಂಬುದನ್ನು ದಲಿತ ಸಂಘಟನೆಗಳು ಮರೆತಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ.

‘ಪರಿಶಿಷ್ಟ ಜಾತಿ’ ಸ್ಥಾನ ನೀಡಿ ಮೀಸಲಾತಿ ಸೌಲಭ್ಯ ಕಲ್ಪಿಸಬಾರದೆಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿರುವ ರಾಜ್ಯದ ಕೆಲವೊಂದು ದಲಿತ ಸಂಘಟನೆಗಳ ನಾಯಕರಿಗೆ ಸನಾತನದ ಸೋಂಕು ತಗಲಿದೆ ಎಂದು ಭಾವಿಸುತ್ತೇನೆ. ಅಂಬೇಡ್ಕರ್, ಪೆರಿಯಾರ್ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಮಾತನಾಡುವ ನಿಜವಾದ ಅಂಬೇಡ್ಕರ್ ವಾದಿಗಳು ಯಾರೂ ಕೂಡ ಇಂತಹ ಕುಲಗೇಡಿತನವನ್ನು ಮಾಡಲಾರರು. 

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನೂ ಸೇರಿಸಿಕೊಂಡು ಮೀಸಲಾತಿಯನ್ನು ಹೆಚ್ಚಿಸಿ, ಸ್ವಜಾತಿಯ ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರಿಗೂ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡುವ ಕೆಲಸವನ್ನು ರಾಜ್ಯದ ಪ್ರಜ್ಞಾವಂತ ದಲಿತ, ಕ್ರೈಸ್ತ ಮತ್ತು ಮುಸ್ಲಿಂ ಸಂಘಟನೆಗಳು ಜಂಟಿಯಾಗಿ ಮಾಡಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ. 

ನಾಳೆ ಬೆಂಗಳೂರಿನ ಅಂಬೇಡ್ಕರ್ ಭವನಕ್ಕೆ ತೆರಳಿ, ಸ್ವಜಾತಿಯ ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬಾರದೆಂದು ಮನವಿ ಸಲ್ಲಿಸುವವರು ಖಂಡಿತವಾಗಿಯೂ ಸ್ಪರ್ಶಿಸಬಹುದಾದ (Touchable) ದಲಿತ ಜನಾಂಗದವರೇ ಆಗಿರುತ್ತಾರೆ. ಇವರೆಲ್ಲರೂ ‘ಕಾವಿ’ ಮನಸ್ಥಿತಿಯ ವ್ಯಸನಿಗಳು. ಇವರಿಗೆ ನಮ್ಮ ನೋವುಗಳು, ದುಃಖ ದುಮ್ಮಾನಗಳು, ಇತಿಹಾಸ ಯಾವುದೂ ಅರ್ಥವಾಗುವುದಿಲ್ಲ.

ನಮ್ಮಿಂದ ಒಬ್ಬ ಮಾತಾಂತರಗೊಂಡು ಇಸ್ಲಾಂ ಧರ್ಮಕ್ಕೆ ಅಥವಾ ಕ್ರೈಸ್ತ ಧರ್ಮಕ್ಕೆ ಹೋದ ಮಾತ್ರಕ್ಕೆ ಅವನ ಮೀಸಲಾತಿಯ ಪಾಲನ್ನು ಸರ್ಕಾರ ಇತರರಿಗೆ ಹಂಚಿ ಕೊಡುವುದಿಲ್ಲ. ಅದು ಹಾಗೆಯೇ… ಅಲ್ಲಿಯೇ ಉಳಿದಿರುತ್ತದೆ. ಅದನ್ನು ಮತ್ತೆ ಅವನಿಗೆ ಕೊಡುವುದರಲ್ಲಿ ತಪ್ಪೇನಿದೆ. ಅದನ್ನು ಅವನು ಮತ್ತೆ ಕೇಳಿ ಪಡೆಯುವುದರಲ್ಲಿ ನಿಮಗೇನು ತೊಂದರೆ. ಇದನ್ನು ಸ್ವಜಾತಿ ವಿರೋಧಿ ಸಂಘಟನೆಗಳು ಅರ್ಥಮಾಡಿಕೊಂಡರೆ, ಅದುವೇ ನಿಜವಾದ ಸಾಮಾಜಿಕ ನ್ಯಾಯ; ಅಂಬೇಡ್ಕರ್ ವಾದ.  

ಪ್ರಗತಿಪರ, ಜಾತ್ಯತೀತ, ಸಾಮಾಜಿಕ ನ್ಯಾಯ ಮಾತನಾಡುವ ಸಮಾಜವಾದಿ ಹಿನ್ನೆಲೆಯ ನಾಯಕ, ನಮ್ಮೆಲ್ಲರ ನೆಚ್ಚಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ವಿಚಾರದಲ್ಲಿ ಗಮನಹರಿಸಿ, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮತ್ತೆ ಅದೇ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದು (ಮುಂದುವರಿಸಬೇಕೆಂದು) ಸಮುದಾಯದ ಪರವಾಗಿ ಮನವಿ ಮಾಡುತ್ತೇವೆ. 

Related Posts