ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಹೋರಾಟ ಮನೋಭಾವವನ್ನು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ: ಸಿದ್ದರಾಮಯ್ಯ » Dynamic Leader
September 18, 2024
ರಾಜಕೀಯ

ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಹೋರಾಟ ಮನೋಭಾವವನ್ನು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ: ಸಿದ್ದರಾಮಯ್ಯ

ರಾಣೆಬೆನ್ನೂರು: ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು; ಸೋಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಣೆಬೆನ್ನೂರು ತಾಲ್ಲೂಕು ದೇವರಗುಡ್ಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕಂಚಿನ ಪುತ್ಥಳಿ ಲೋಕಾರ್ಪಣೆಗೊಳಿಸಿ, ಬಳಿಕ ಕನಕಭವನವನ್ನು ಉದ್ಘಾಟಿಸಿ ಮಾತನಾಡಿದರು.

“ಮಾಲತೇಶ ದೇವರ ಸನ್ನಿಧಿ ದೇವರಗುಡ್ಡವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ ನಡೆಸಲಾಗುವುದು. ದೇವರಗುಡ್ಡಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದರು.

“ನನ್ನ ವಿರುದ್ಧ ನಡೆಯುತ್ತಿರುವ ಬಿಜೆಪಿ – ಜೆಡಿಎಸ್ ನ ಸೇಡು, ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ. ಮಾಲತೇಶ ದೇವರ ಆಶೀರ್ವಾದ – ನಿಮ್ಮ ಪ್ರೀತಿ ನನ್ನ ಮೇಲಿರಲಿ” ಎಂದು ಪ್ರಾರ್ಥಿಸಿಕೊಂಡರು.

“ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜನರ ಮಡಿಲಿಗೆ ಹಾಕುವ ಮೂಲಕ ನುಡಿದಂತೆ ನಡೆದಿದ್ದೇನೆ. ಎರಡನೇ ಬಾರಿ ಸಿಎಂ ಆಗಿ ಒಂದೇ ವರ್ಷದಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇನೆ” ಎಂದು ಹೇಳಿದರು.

“ನಾನು ಅಸೂಯೆ ಮಾಡುವವರಿಂದ ದ್ವೇಷದ ರಾಜಕಾರಣ ಮಾಡುವವರಿಂದ ಅಧಿಕಾರಕ್ಕೆ ಬರಲಿಲ್ಲ. ಜನರ ಆಶೀರ್ವಾದದಿಂದ ಹಿಂದುಳಿದ ಸಮಾಜದ ಸಿದ್ದರಾಮಯ್ಯ ಸಿಎಂ‌ ಆಗಿರೋದು. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ

ಜಾತಿ ವ್ಯವಸ್ಥೆಯ ಈ ಸಮಾಜದಲ್ಲಿ ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂದು ಮಹಾತ್ಮಗಾಂಧಿ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಇದೇ ವಿಪಕ್ಷದವರಿಗೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.

“ನಾನು ಯಾರಿಗೂ, ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡುವವನಲ್ಲ. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು, ಸೋಲಿಸಬೇಕು.

ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮ, ಹೋರಾಟ ಮನೋಭಾವವನ್ನು ನಾವು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ” ಎಂದು ಹೇಳಿದರು.

Related Posts