ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಕ್ಕೆ ಕೋರ್ಟ್ ಅನುಮತಿ: ಉಳಿದ ಆರೋಪಿಗಳೂ ಸ್ಥಾಳಾಂತರ!
ಬೆಂಗಳೂರು: ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಲವು ಆರೋಪಿಗಳನ್ನು ಸಹ ಇದೀಗ ಬೇರೆ ಬೇರೇ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಚೀಫ್ ಸೂಪರಿಡೆಂಟ್ ರಿಂದ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ಅದರಂತೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ನ್ಯಾಯಾಲಯದ ಆದೇಶದ ಪ್ರತಿ ಸಿಗುತ್ತಿದ್ದಂತೆ ಜೈಲು ಸಿಬ್ಬಂದಿ ದರ್ಶನ್ ರನ್ನು ಸ್ಥಳಾಂತರಿಸಲಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ನಟನಿಗೆ ಸಂಕಷ್ಟ ಎದುರಾಗಿದೆ.
ಯಾರ‍್ಯಾರು ಯಾವ-ಯಾವ ಜೈಲಿಗೆ ಶಿಫ್ಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಆರೋಪಿ ಪವನ್, ರಾಘವೇಂದ್ರ ನಂದೀಶ್ ನನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಆರೋಪಿ ಜಗದೀಶ್ ಅವರನ್ನು ಶಿವಮೊಗ್ಗಕ್ಕೆ ಹಾಗೂ ಧನರಾಜ್ನನ್ನು ಧಾರವಾಡ ಜೈಲಿಗೆ ಸ್ಥಳಾಂತರಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ತಿದ್ದಾರೆ.
ಕೊಲೆ ಪ್ರಕರಣದ ಆರೋಪಿ ವಿನಯ್ನನ್ನು ವಿಜಯಪುರ ಜೈಲಿಗೆ, ನಾಗರಾಜನನ್ನು ಗುಲ್ಬರ್ಗ ಹಾಗೂ ಲಕ್ಷ್ಮಣನನ್ನು ಶಿವಮೊಗ್ಗ, ಆರೋಪಿ ಪ್ರದೂಶ್ ನನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಈಗಾಗಲೇ ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲೆ ಇದ್ದರು. ಅವರು ಅಲ್ಲೇ ಇರಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆಗಿರುವ ನಟಿ ಪವಿತ್ರಾ ಗೌಡ ಅವರು ಪರಪ್ಷನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ಅನುಕುಮಾರ್ ಹಾಗೂ ದೀಪಕ್ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ದರ್ಶನ್ ಅವರನ್ನು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಸದ್ಯ ದರ್ಶನ್ ಕರೆದೊಯ್ಯುವ ಸಮಯದ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ರೌಡಿಶೀಟರ್ ಗಳ ಜೊತೆ ದರ್ಶನ್ ಸಂಪರ್ಕ ಬೆಳೆಸಿದ್ದು ಹೇಗೆ? ಲಾನ್ ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು. ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧವಿದ್ದರೂ ನಿಷೇಧಿತ ಸ್ಥಳದಲ್ಲಿ ಸಿಗರೇಟ್ ಸೇದಲು ಸೇರಿದ್ದರ ಬಗ್ಗೆ ತನಿಖೆ ನಡೆಸಲಿದ್ದಾರೆ.
ಹುಳಿಮಾವು ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಎರಡನೇ ಪ್ರಕರಣದ ತನಿಖೆ ನಡೆಯಲಿದೆ. ಮೊಬೈಲ್ ಫೋನ್ ನಲ್ಲಿ ಪೋಟೊ ತೆಗೆದಿದ್ದು ಯಾರು? ಹೇಗೆ ಇದೆಲ್ಲಾ ಸಾಧ್ಯವಾಯ್ತು. ಮೊಬೈಲ್ ಕೊಟ್ಟವರು ಯಾರು? ವಿಡಿಯೊ ಕರೆ ಮಾಡಿದ್ದು ಹೇಗೆ ಎನ್ನುವ ಬಗ್ಗೆ ಈ ಟೀಮ್ ತನಿಖೆ ನಡೆಸಲಿದೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದೆ. ಜಾಮರ್ ಅಳವಡಿಸಿರುತ್ತಾರೆ. ನೆಟ್ ವರ್ಕ್ ಕನೆಕ್ಷನ್ ಹೇಗಿದೆ ಸಿಕ್ಕಿದೆ. ಫೋಟೋ ಸೆಂಡ್ ಮಾಡಿದ್ದು ಹೇಗೆ? ವಿಡಿಯೋ ಕಾಲ್ ಬಂದಿದ್ದು ಹೇಗೆ? ಎನ್ನುವ ಬಗ್ಗೆ ತನಿಖೆ ನಡೆಯಲಿದೆ.