ಸಂಸ್ಕೃತಿ ಬೇರೆ – ಪ್ರತ್ಯೇಕತೆ ಬೇರೆ! : ಮಧ್ಯಪ್ರದೇಶದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ವಿಭಜನೆ!
ಡಿ.ಸಿ.ಪ್ರಕಾಶ್
ಭಾರತದ ಸಂವಿಧಾನವು ಈ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಮತ್ತು ಸಮಾನತೆಯನ್ನು ಬೆಳೆಸಿದೆ. ಅದಕ್ಕಾಗಿಯೇ ಆ ಸಮಾನತೆಯನ್ನು ಒಪ್ಪಿಕೊಳ್ಳಲು ಆರ್‌ಎಸ್‌ಎಸ್ (RSS) ನಿರಾಕರಿಸುತ್ತಿದೆ.
ಭಾಷೆಯಿಂದ, ಪದ್ಧತಿಗಳಿಂದ, ನಮ್ಮ ಪೂರ್ವಜರ ಮಾರ್ಗಗಳನ್ನು ಅಳವಡಿಸಿಕೊಳ್ಳುವುದರಿಂದ ಇತಿಹಾಸ, ಪ್ರೀತಿ ಮತ್ತು ಜ್ಞಾನ ಬೆಳೆಯಬೇಕೆ ಹೊರತು, ಗುಲಾಮಗಿರಿ ಬೆಳೆಯಬಾರದು ಎಂಬುದನ್ನು ಕಳೆದ 1,000 ವರ್ಷಗಳ ರಾಜಕೀಯದಿಂದ ನಾವು ಕಲಿತಿದ್ದೇವೆ.
ಅದರ ಭಾಗವಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ (Dr.B.R.Ambedkar) ಅವರು ಸಂವಿಧಾನದಲ್ಲಿ ಸ್ವಯಂ ನಿರ್ಣಯದ ಹಕ್ಕು ಮತ್ತು ನಿಮ್ಮ ಇಷ್ಟದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಒತ್ತಿ ಹೇಳಿದರು. ಈ ಕ್ರಮದಿಂದಾಗಿ ಧಾರ್ಮಿಕ ಸಾಮರಸ್ಯವನ್ನು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯವಸ್ಥೆ ಈ ಸಮಾಜದಲ್ಲಿ ಚಿಗುರೊಡೆಯಿತು. ಅದಕ್ಕಾಗಿಯೇ ಆ ಸಮಾನತೆಯನ್ನು ಒಪ್ಪಿಕೊಳ್ಳಲು ಆರ್‌ಎಸ್‌ಎಸ್ ನಿರಾಕರಿಸಿದೆ.
ಆರ್‌ಎಸ್‌ಎಸ್ ಹುಟ್ಟಿನ ಆಧಾರದ ಮೇಲೆ ಜನರ ನಡುವೆ ವಿಭಜನೆಯನ್ನು ಸೃಷ್ಟಿಸುವ… ಮನು ಧರ್ಮವನ್ನು ಉತ್ತೇಜಿಸುವ ಸಂಘಟನೆಯಾಗಿದೆ. ಅಲ್ಲದೆ, ಉತ್ತರ ಪ್ರದೇಶದ ಬಾಬರಿ ಮಸೀದಿ ಧ್ವಂಸಕ್ಕೆ ಮತ್ತು ಭಾರತದ ಹಲವೆಡೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಮೂಲ ಕಾರಣವಾಗಿದೆ.
ಆರ್‌ಎಸ್‌ಎಸ್ ಆರಂಭವಾಗಿ 98 ವರ್ಷಗಳಾಗಿವೆ. ಇನ್ನು ಒಂದು ತಿಂಗಳಲ್ಲಿ 99ನೇ ವರ್ಷ ಪೂರ್ಣಗೊಳ್ಳಲಿದೆ. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಈ ಸಂಘಟನೆಯನ್ನು ಆರಂಭಿಸಲಾಗಿತ್ತು. ಅದರ ಪ್ರತ್ಯೇಕತಾವಾದವು ಕೂಡ ತುಂಬಾ ಹಳೆಯದ್ದೆ.
ಇಲ್ಲಿ ಪ್ರಾಚೀನತೆ ಎಂಬುದು ಸಂಸ್ಕೃತಿಯಲ್ಲ! ಪ್ರತ್ಯೇಕತೆಯಾಗಿ ಕಾಣಿಸಿಕೊಳ್ಳುತ್ತದೆ. ಕಾರಣ ಆರ್‌ಎಸ್‌ಎಸ್ ಎಲ್ಲರಿಗೂ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ. ಎಲ್ಲರಿಗೂ ಎಲ್ಲಾ ಹಕ್ಕುಗಳನ್ನು ಹೊಂದಲು ಅವಕಾಶ ನೀಡುವುದಿಲ್ಲ. ಅದಕ್ಕೆ ಅತ್ಯುತ್ತಮ ಪುರಾವೆ ಎಂದರೆ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಾರತೀಯ ಸಂವಿಧಾನವನ್ನು ಮೊದಲಿನಿಂದಲೂ ನಾಶಮಾಡಲು ಬಯಸುವ ಗುಂಪು ಆರ್‌ಎಸ್‌ಎಸ್ ಆಗಿರುವುದು.
ಅಂದು ಕೇವಲ ಕೂಗಾಟವಾಗಿದ್ದ ಪ್ರತಿಭಟನೆ, ಈಗ ಅಧಿಕಾರವನ್ನು ವಶಪಡಿಸಿಕೊಳ್ಳುವ ಮೂಲಕ ಶಾಸನ ತಿದ್ದುಪಡಿಯಾಗಿ ಬದಲಾಗಿದೆ. ಅಲ್ಪಸಂಖ್ಯಾತರಿಗೆ ಹಕ್ಕು ನೀಡುವ ವಿವಿಧ ಕಾನೂನುಗಳಲ್ಲಿ ಬಿಜೆಪಿ ಬದಲಾವಣೆ ತರಲು ಆರ್‌ಎಸ್‌ಎಸ್‌ನ ಸಿದ್ಧಾಂತವೇ ಕಾರಣವಾಗಿದೆ.
ಆರ್‌ಎಸ್‌ಎಸ್ ಬಿಜೆಪಿಯ ಮೂಲಾಧಾರವಾಗಿದೆ. ಇಂದು ಬಿಜೆಪಿಯ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಲ್ಲರೂ ಆರ್‌ಎಸ್‌ಎಸ್‌ನ ಕಟ್ಟಾ ಅನುಯಾಯಿಗಳೇ.
ಆ ಕಾರಣದಿಂದಲೆ, ಆಡಳಿತ ಶಕ್ತಿಯೊಂದಿಗೆ ಕಾನೂನನ್ನು ಬದಲಾಯಿಸಿದರೆ ಸಾಲದು… ಅಲ್ಪಸಂಖ್ಯಾತರನ್ನು ಗುಲಾಮರನ್ನಾಗಿ ಮಾಡಿದರೆ ಸಾಲದು… ಸೈದ್ಧಾಂತಿಕ ಹೇರಿಕೆಯ ಅಗತ್ಯವಿದೆ ಎಂಬ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿ, ರಾಜ್ಯ ಸರ್ಕಾರದ ಪಠ್ಯಕ್ರಮಗಳಲ್ಲಿ ಬದಲಾವಣೆ ಸೇರಿದಂತೆ ಅನೇಕ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸುತ್ತಿದೆ.
ಅಂತಹ ಚಟುವಟಿಕೆಗಳ ಮುಂದುವರಿಕೆಯಾಗಿ, ಮಧ್ಯಪ್ರದೇಶದ ಉನ್ನತ ಶಿಕ್ಷಣ ಪಠ್ಯಕ್ರಮದಲ್ಲಿ ಆರ್‌ಎಸ್‌ಎಸ್ ನಾಯಕರ ಪುಸ್ತಕಗಳನ್ನು ಸೇರಿಸುವುದೂ ಆಗಿದೆ. ಈ ನಡೆ ತಪ್ಪು ಎಂದು ವಿರೋಧ ಪಕ್ಷಗಳು ಪ್ರತಿಪಾದಿಸುತ್ತಿದ್ದರೆ, ಸಂಸ್ಕೃತಿ ಬೆಳೆಸುವುದೇ ಆರ್‌ಎಸ್‌ಎಸ್ ಉದ್ದೇಶ ಎಂದು ಬಿಜೆಪಿ ತಿರುಚಿ ಹೇಳುತ್ತಿದೆ.
ಹೀಗಾಗಿ, ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಕೈಲಾಶ್ ಸಾರಂಗ್, “ಮುಂದಿನ ಪೀಳಿಗೆಗೆ ನಮ್ಮ ಹಿಂದಿನ ಸಂಸ್ಕೃತಿಯನ್ನು ಕಲಿಸುವುದು ತಪ್ಪೇ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಈ ಮೂಲಕ, ಆರ್‌ಎಸ್‌ಎಸ್‌ನ ಮೂಲಭೂತ ರಾಜಕೀಯವಾದ ವಿಭಜನೆಯನ್ನು ಸಾಂಸ್ಕೃತಿಕೀಕರಣಗೊಳಿಸಿ ಜನರನ್ನು ದಿಕ್ಕು ತಪ್ಪಿಸುವ ಕೃತ್ಯವನ್ನು ಇತಿಹಾಸಕಾರರು ಮತ್ತು ರಾಜಕೀಯ ನಾಯಕರು ತೀವ್ರವಾಗಿ ಟೀಕಿಸುತ್ತಿದ್ದಾರೆ.