ಲೋಕಸಭಾ ಚುನಾವಣೆ 2024: ಕಾಂಗ್ರೆಸ್‌ಗೆ ದಸಂಸ (ಭೀಮವಾದ) ಬೆಂಬಲ: ಶರಣು ಎಸ್.ನಾಟೇಕರ್
• ಗಿರೀಶ್ ಕುಮಾರ್ ಯಾದಗಿರಿ
ಯಾದಗಿರಿ: ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನಿರ್ಧರಿಸಿದೆ ಎಂದು ದಸಂಸ ಜಿಲ್ಲಾಧ್ಯಕ್ಷ ಶರಣು ಎಸ್.ನಾಟೇಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸಂಸ ರಾಜ್ಯ ಸಮಿತಿ ಆದೇಶದ ಮೇರೆಗೆ ಜಿಲ್ಲೆಯಲ್ಲಿನ ಲೋಕಸಭಾ ಚುನಾವಣೆ ಹಾಗೂ ಸುರಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ರಾಯಚೂರು ಲೋಕಸಭೆ ಅಭ್ಯರ್ಥಿ ಜಿ.ಕುಮಾರನಾಯಕ, ಕಲ್ಬುರ್ಗಿ ಅಭ್ಯರ್ಥಿ ಡಾ.ರಾಧಾಕೃಷ್ಣ ದೊಡ್ಡಮನಿ, ಸುರಪುರ ವಿಧಾನಸಭೆ ಉಪಚುನಾವಣೆ ಅಧಿಕೃತ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಇವರಿಗೆ ಬೆಂಬಲಿಸಲು ಭೀಮವಾದ ಸಮಿತಿಯ ಜಿಲ್ಲಾ, ತಾಲ್ಲೂಕು ವತಿಯಿಂದ ಹೋಬಳಿ ಹಾಗೂ ಹಿರಿಯ ಗ್ರಾಮ, ಮಹಿಳಾ ನಗರ ಘಟಕಗಳ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆಸಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ‘ಪೆನ್ ಡ್ರೈವ್’ ಪ್ರಕರಣ ಬಯಲಿಗೆ ಬಂದ್ದಿದ್ದು ಕೂಡಲೇ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ.ರೇವಣ್ಣ ಅವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕೆಂದು ದಸಂಸ ಭೀಮವಾದ ಒತ್ತಾಯಿಸಿದೆ.
ಇದಕ್ಕೂ ಮುನ್ನ ದಸಂಸ ಜಿಲ್ಲಾ ಸಮಿತಿ ವತಿಯಿಂದ ರಾಜ್ಯದ ಹಿರಿಯ ರಾಜಕಾರಣಿ, ಬುದ್ಧ, ಬಸವ ಅಂಬೇಡ್ಕರ್ ಅನುಯಾಯಿಯಾಗಿದ್ದ ದಲಿತ ಚೇತನ ಮಾಜಿ ಸಚಿವ ಹಾಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಭೀಮರಾಯ ಸಿಂಧಿಗೇರಿ, ವಿಭಾಗೀಯ ಸಂಚಾಲಕ ಶಿವಶಂಕರ, ಕಲ್ಬುರ್ಗಿ ಜಿಲ್ಲಾ ಸಂಚಾಲಕರಾದ ಕಾಶಿನಾಥ ಶೆಳ್ಳಗಿ, ಮಾರುತಿ ಕಾಳಗಿ, ಯಾದಗಿರಿ ಜಿಲ್ಲಾ ಸಂ. ಸಂಚಾಲಕರಾದ ಮಹಾದೇವಪ್ಪ ಗುರುಸುಣಿಗಿ, ಮಲ್ಲಪ್ಪ ಲಂಡನ್‌ಕರ್, ಮಲ್ಲಿಕಾರ್ಜುನ ತಳವಾರಗೇರಿ. ಸಿದ್ರಾಮ ನಾಯ್ಕಲ್, ತಾ. ಸಂಚಾಲಕ ಶರಣಪ್ಪ ಯರಗೋಳ, ಶರಣು ಹಾಲಳ್ಳಿ ಇನ್ನಿತರರು ಇದ್ದರು.