ಅಮಿತ್ ಶಾ ನಕಲಿ ವಿಡಿಯೋ ಅವ್ಯವಹಾರ; ತೆಲಂಗಾಣ ಮುಖ್ಯಮಂತ್ರಿಗೆ ಸಮನ್ಸ್ ಕಳುಹಿಸಿದ ದೆಹಲಿ ಪೊಲೀಸರು!
ಡೀಪ್‌ಫೇಕ್ ಮಾಡಿದ ವಿಡಿಯೋದಲ್ಲಿ, ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (ಎಸ್‌ಸಿ), ಬುಡಕಟ್ಟು (ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮಿತ್ ಶಾ ಹೇಳಿದ್ದರು ಎಂದು ಉಲ್ಲೇಖಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಎಂದು ಹೇಳುವ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ, ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (ಎಸ್‌ಸಿ), ಬುಡಕಟ್ಟು (ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮಿತ್ ಶಾ ಹೇಳಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಅಮಿತ್ ಶಾ ಅವರು ಆ ರೀತಿ ಮಾತನಾಡಿಲ್ಲ ಮತ್ತು ವಿಡಿಯೋ ಡೀಪ್‌ಫೇಕ್ ಮಾಡಿದ ನಕಲಿ ಎಂದು ಬಿಜೆಪಿ ಕಿಡಿಕಾರಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ಹಿನ್ನಲೆಯಲ್ಲಿ, ನಿನ್ನೆ ದೆಹಲಿ ಪೊಲೀಸರ ಬಳಿ ದೂರು ದಾಖಲಿಸಿರುವ ಬಿಜೆಪಿ, “ತೆಲಂಗಾಣದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ಕಾನೂನು ಬಾಹಿರವಾಗಿದ್ದು ಅದನ್ನು ತೆಗೆದುಹಾಕಬೇಕು ಎಂದು ಅಮಿತ್ ಶಾ ಮಾತನಾಡಿರುವ ಹಳೆಯ ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗಿದೆ. ಈ ವಿಡಿಯೋವನ್ನು ತೆಲಂಗಾಣ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಪೇಜ್ ನಲ್ಲಿ ಶೇರ್ ಮಾಡಿದೆ. ನಂತರ ಪಕ್ಷದ ಹಲವು ಮುಖಂಡರು ಇದನ್ನು ಹಂಚಿಕೊಂಡಿದ್ದಾರೆ” ಎಂದು ಹೇಳಿದೆ.
ದೂರಿನ ಆಧಾರದ ಮೇಲೆ, ದೆಹಲಿ ಪೊಲೀಸರು ಆ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಖಾತೆಗಳ ವಿವರಗಳನ್ನು ನೀಡುವಂತೆ ಎಕ್ಸ್ ಮತ್ತು ಫೇಸ್‌ಬುಕ್‌ಗೆ ಕೇಳಿಕೊಂಡಿದ್ದಾರೆ. ಇದಲ್ಲದೆ, ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್ ಗಳಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದ ವಿಶೇಷ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದಾದ ಬಳಿಕ ಇಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬಳಸುತ್ತಿದ್ದ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡು ಮೇ 1 ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, “ಬಿಜೆಪಿ ಮತ್ತು ಪ್ರಧಾನಿ ಮೋದಿ ತಮ್ಮ ರಾಜಕೀಯ ಲಾಭಕ್ಕಾಗಿ ದೆಹಲಿ ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯ ನಂತರ ನರೇಂದ್ರ ಮೋದಿ ಅವರು ಚುನಾವಣೆ ಗೆಲ್ಲಲು ದೆಹಲಿ ಪೊಲೀಸರನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಇಲ್ಲಿ ಯಾರೂ ಇದಕ್ಕೆ ಹೆದರುವುದಿಲ್ಲ. ಇಂತಹ ಕುತಂತ್ರಗಳಿಗೆ ಉತ್ತರ ಕೋಡುವ ಬಹಳ ಜನ ನಮ್ಮಲ್ಲಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ವಿಶೇಷವಾಗಿ ತೆಲಂಗಾಣ ಮತ್ತು ಕರ್ನಾಟಕದಲ್ಲಿ ನಾವು ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.