ಧಾರ್ಮಿಕ ಭಾವನೆ ಕೆರಳಿಸುವ ಭಾಷಣ: ಪ್ರಧಾನಿ ಮೋದಿ ವಿರುದ್ಧ ತಮಿಳುನಾಡಿನಲ್ಲಿ ಕೇಸ್!
ಚೆನ್ನೈ: ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಯವರು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಭಾಷಣ ಮಾಡಿರುವುದು ದೇಶದ ಜನರಲ್ಲಿ ಭಾರೀ ಆಘಾತವನ್ನುಂಟು ಮಾಡಿತ್ತು. “ಇಂಡಿಯಾ” ಮೈತ್ರಿಕೂಟದ ನಾಯಕರು ಪ್ರಧಾನಿ ಮೋದಿಯವರ ಭಾಷಣಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಮುಖ್ಯ ಚುನಾವಣಾ ಆಯೋಗ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೋದಿ ಭಾಷಣದ ಬಗ್ಗೆ ಮುಖ್ಯ ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ. ಅಲ್ಲದೆ, ಪ್ರಧಾನಿ ಮೋದಿ ಅವರನ್ನು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದು ಆಗ್ರಹಿಸಿ ದೆಹಲಿ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ, ಪ್ರಧಾನಿ ಮೋದಿ ವಿರುದ್ಧ ತಮಿಳುನಾಡಿನಲ್ಲಿ ಧಾರ್ಮಿಕ ಭಾವನೆ ಕೆರಳಿಸಿರುವ ಪ್ರಕರಣ ದಾಖಲಾಗಿದೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಮಿಳುನಾಡು ರಾಜ್ಯಾಧ್ಯಕ್ಷ ಅಬ್ದುಲ್ ರೆಹಮಾನ್ ಅವರು ಪ್ರಧಾನಿ ಮೋದಿ ವಿರುದ್ಧ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅದೇ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಕೆ.ತಮಿಳರಸನ್ ಅವರು ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ದೂರು ದಾಖಲಿಸಿದ್ದಾರೆ.