Welfare Party: ಮತದಾನ ಮಾಡಿ ಜವಾಬ್ದಾರಿಯುತ ನಾಗರಿಕರಾಗೋಣ: ತಾಹೇರ್ ಹುಸೇನ್ » Dynamic Leader
October 10, 2024
ರಾಜಕೀಯ

Welfare Party: ಮತದಾನ ಮಾಡಿ ಜವಾಬ್ದಾರಿಯುತ ನಾಗರಿಕರಾಗೋಣ: ತಾಹೇರ್ ಹುಸೇನ್

ಬೆಂಗಳೂರು: ನಮ್ಮ ದೇಶ ಚುನಾವಣೆಯ ಹೊಸ್ತಿಲಿನಲ್ಲಿದೆ. ಈ ಬಾರಿ ನಡೆಯುವಂತಹ ಚುನಾವಣೆಯು ಪ್ರಜಾಪ್ರಭುತ್ವ ಭಾರತದ ಭವಿಷ್ಯವನ್ನು ನಿರ್ಣಯಿಸುವ ಚುನಾವಣೆಯಾಗಿದೆ ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಹೇಳಿದ್ದಾರೆ.

“ಕಳೆದ ಹತ್ತು ವರ್ಷಗಳ ಆಡಳಿತ ಇಲ್ಲಿನ ಸಂವಿಧಾನದ ಆಶಯವನ್ನು ದುರ್ಬಲ ಪಡಿಸುವಂತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮುಂದೆ ಏನಾದರೂ ಈ ಅಧಿಕಾರ ಮುಂದುವರಿದರೆ ಸಂವಿಧಾನವನ್ನೇ ಬದಲಾಯಿಸುವ ಸಾಧ್ಯತೆ ಇದೆ. ಅವರು ಅದನ್ನು ಹೇಳುತ್ತಲೂ ಇದ್ದಾರೆ. ಮುಂದಿನ ದಿನಗಳು ನಿಜಕ್ಕೂ ಜಾತ್ಯಾತೀತ ತತ್ವಗಳಿಗೆ ಮಾರಕವಾಗಲಿದೆ. ಕೋಮುಪ್ರಚೋದನೆ ಮಾತ್ರ ಇವರ ಬಂಡವಾಳ. ಅದನ್ನು ಬಳಸಿಕೊಂಡು ಜನರನ್ನು ದಾರಿಗೆಡಿಸುತ್ತಿದ್ದಾರೆ.

ಧಾರ್ಮಿಕ ಭಾವನೆ ಕೆರಳಿಸುವ ಭಾಷಣದ ಮುಖಾಂತರ ಮತಪೆಟ್ಟಿಗೆ ಭದ್ರ ಪಡಿಸುತ್ತಿದ್ದಾರೆ. ಕಾರ್ಪೊರೇಟ್ ದಿಗ್ಗಜರ ಕೈಗೆ ದೇಶವನ್ನು ನೀಡುತ್ತಿದ್ದಾರೆ. ರೈತರನ್ನು ಕಡೆಗಣಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿ ಯುವಕರ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಾಗಿದೆ. ಅಡುಗೆ ಅನಿಲ ಗ್ರಹ ಬಳಕೆ ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಹೀಗೆ ದೇಶದ ಎಲ್ಲಾ ಮೂಲಭೂತ ಸಮಸ್ಯೆಗಳನ್ನೂ ಕಡೆಗಣಿಸಲಾಗುತ್ತಿದೆ. ಆದರೂ ಆಡಳಿತಾರೂಡರು ದೇಶದ ಅಭಿವೃದ್ಧಿಯ ಮಾತನಾಡುತ್ತಿದ್ದಾರೆ.

ದೇಶದ ಅಲ್ಪ ಸಂಖ್ಯಾತರಿಗೆ ಮತ್ತು ದಲಿತ, ಹಿಂದುಳಿದ ವರ್ಗಗಳಲ್ಲಿ ಅಭದ್ರತಾ ಭಾವನೆ ಹೆಚ್ಚಾಗುತ್ತಿದೆ. ಮಣಿಪುರದಲ್ಲಿ ಕ್ರೈಸ್ತರ ವಿರುದ್ಧ ನಡೆಯುತ್ತಿರುವಂತಹ ದಾಳಿಯ ಬಗ್ಗೆ ಕೇಂದ್ರ ಮೌನವಾಗಿದೆ. ಪ್ರತಿ ಪಕ್ಷಗಳ ಮೇಲೆ ಇಡಿ, ಐಟಿ ದಾಳಿಯ ಮೂಲಕ ಬೆದರಿಸಿ ಬಾಯ್ಮುಚ್ಚಿಸುವ ಶ್ರಮ ನಡೆಯುತ್ತಿವೆ. ತಮ್ಮ ಪಕ್ಷಕ್ಕೆ ಸೇರುವವರಿಗೆ ಕ್ಲೀನ್ ಚಿಟ್ ನೀಡುತ್ತಿದೆ. ಹೀಗೆ ಆಡಳಿತವು ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಹೀಗಿರುವಾಗ ಪ್ರತಿಪಕ್ಷಗಳ ಒಕ್ಕೂಟದ ಅಗತ್ಯ ಈ ದೇಶಕ್ಕೆ ಅಗತ್ಯವಿದೆ.

ಈ ದೇಶವನ್ನು ಈ ಸ್ವಾರ್ಥ ಹಿತಾಸಕ್ತಿಗಳಿಂದ ಕಾಪಾಡಬೇಕಾಗಿದೆ. ಮತದಾನ ಎಂಬ ಮೂಲಭೂತ ಹಕ್ಕುಗಳನ್ನು ಚಲಾಯಿಸುವ ಸಮಯ ಕೂಡಿ ಬಂದಿದೆ. ಇದನ್ನು ಸಮರ್ಪಕವಾಗಿ ಬಳಸಬೇಕಾಗಿದೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರೂ ಇದರಲ್ಲಿ ಭಾಗಿಯಾಗುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಇದರ ಅಗತ್ಯವಿದೆ. ಭಾರತ ಉತ್ತಮ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಇದರಲ್ಲಿ ಕೈಜೋಡಿಸಬೇಕಾಗಿದೆ” ಎಂದು ವೆಲ್‌ಫೇರ್ ಪಾರ್ಟಿಯ ತಾಹೇರ್ ಹುಸೇನ್ ಹೇಳಿದ್ದಾರೆ.

Related Posts