ವೃಷಭಾವತಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಸಿದ್ದರಾಮಯ್ಯ! » Dynamic Leader
October 11, 2024
ರಾಜ್ಯ

ವೃಷಭಾವತಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಸಿದ್ದರಾಮಯ್ಯ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವೃಷಭಾವತಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬೆಜೆಪಿ ಕೇವಲ ನಿಮ್ಮ ಭಾವನೆಗಳನ್ನು ಕೆರಳಿಸುತ್ತದೆ – ನಾವು ನಿಮ್ಮ ಬದುಕಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ನಾವು ಮಾಡುವ ನೀರಾವರಿ ಯೋಜನೆ, ಕುಡಿಯುವ ನೀರಿನ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಿಂದಿನ ಸರ್ಕಾರ ಏಕೆ ಮಾಡಲಿಲ್ಲ? ಕೇವಲ ನಿಮ್ಮನ್ನು ಭಾವನಾತ್ಮಕವಾಗಿ ಮರುಳು ಮಾಡಿದರೆ ಸಾಕಾ? ನಾವು ನಿಮ್ಮನ್ನು ದೇವರು – ಧರ್ಮದ ಹೆಸರಲ್ಲಿ ಮರುಳು ಮಾಡಿ ಅಧಿಕಾರ ನಡೆಸುವುದಿಲ್ಲ. ಅನ್ನ, ಆರೋಗ್ಯ, ಅಕ್ಷರ, ಸೂರು, ನೀರಿಗಾಗಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ಹೇಳಿದರು.

3 ಸಾವಿರ ಕೋಟಿ ರೂಪಾಯಿಯನ್ನು ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿಗೆ ನಾವು ಖರ್ಚು ಮಾಡಿದ್ದೆವು ಮತ್ತು ಈಗ ವೃಷಭಾವತಿ ಯೋಜನೆಯನ್ನು 2,240 ಕೋಟಿ ಖರ್ಚು ಮಾಡಿ ಜಾರಿ ಮಾಡುತ್ತಿದ್ದೇವೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಜಿಲ್ಲೆಗಳ ಜನರ ನೀರಿನ ಬವಣೆ ಶಾಶ್ವತವಾಗಿ ತೀರುತ್ತದೆ. ಮೊದಲ ಹಂತದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಇದರಿಂದ ನಾಲ್ಕೂ ಜಿಲ್ಲೆಗಳ ಅಂತರ್ಜಲ ಪ್ರಮಾಣ ವೃದ್ಧಿಯಾಗುತ್ತದೆ. ಜಮೀನುಗಳಿಗೆ ನೀರಿನ ಆಸರೆ ಹೆಚ್ಚಾಗಿ ಜನರ ಆರ್ಥಿಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಹೇಳಿದರು.

ಶಾಸಕ ಶ್ರೀನಿವಾಸ್ ಅವರು ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ ರೂ.850 ಕೋಟಿಗೂ ಹೆಚ್ಚು ಹಣವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಶ್ರೀನಿವಾಸ್ ಬಹಳ ಕ್ರಿಯಾಶೀಲ ಶಾಸಕ. ಹಿಡಿದ ಕೆಲಸ ಬಿಡಲ್ಲ. ನನ್ನ ಬಳಿಗೆ ಬಂದಾಗೆಲ್ಲಾ ನೆಲಮಂಗಲದ ಅಭಿವೃದ್ಧಿ ಬಗ್ಗೆಯೇ ಚರ್ಚೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಹಣ ತರುತ್ತಿದ್ದಾರೆ. ಆದ್ದರಿಂದ ಶ್ರೀನಿವಾಸ್ ಅವರನ್ನು ಶಾಶ್ವತವಾಗಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ಜನರಿಗೆ ಅನ್ನ ಕೊಡಬೇಕು. ಅದಕ್ಕಾಗಿ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಕೊಡ್ತೀವಿ, ನಮಗೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಅನ್ನ ಕೊಡಲು ನಿರಾಕರಿಸಿತು. ಬಡವರ ಅನ್ನ ವಿರೋಧಿಸುವ ಬಿಜೆಪಿಗೆ ನಾಚಿಕೆ ಕೂಡ ಆಗಲಿಲ್ಲ. ಬಳಿಕ ನಾವೇ ಅಕ್ಕಿ ಬದಲಿಗೆ ಹಣವನ್ನು ಪ್ರತಿಯೊಬ್ಬರ ಖಾತೆಗೆ ಹಾಕಿದರೆ, ಈ ಫಲಾನುಭವಿಗಳನ್ನು ಬಿಜೆಪಿ ನಿರಂತರವಾಗಿ ಅವಮಾನಿಸುತ್ತಿದೆ. ಬಡವರನ್ನು ಅವಮಾನಿಸುವುದು ಬಿಜೆಪಿಗೆ ಚಾಳಿ ಆಗಿಬಿಟ್ಟಿದೆ. ಬಡವರ ಹಸಿವನ್ನು ಹೀಯಾಳಿಸುವುದನ್ನು ಅವರು ತಕ್ಷಣ ನಿಲ್ಲಿಸಬೇಕು ಎಂದು ಕಿಡಿಕಾರಿದರು.

Related Posts