ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 11 ಕ್ಷೇತ್ರಗಳನ್ನು ಹಂಚಿಕೆ ಮಾಡಿ ಮೈತ್ರಿಯನ್ನು ಉಳಿಸಿಕೊಂಡ ಅಖಿಲೇಶ್!
ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ 11 ಕ್ಷೇತ್ರಗಳನ್ನು ನೀಡಲಾಗುವುದು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿಯನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ “ಇಂಡಿಯಾ” ಹೆಸರಿನಲ್ಲಿ 28 ವಿರೋಧ ಪಕ್ಷಗಳು ರಚಿಸಿರುವ ಒಕ್ಕೂಟವು ಕ್ಷೇತ್ರಗಳ ಹಂಚಿಕೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ ಸಮಸ್ಯೆ ತಲೆ ಎತ್ತಲು ಪ್ರಾರಂಭಿಸಿತು.
ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಮಮತಾ ಘೋಷಿಸಿದ್ದಾರೆ. ಅದೇ ರೀತಿ ಪಂಜಾಬ್‌ನ ಎಲ್ಲಾ 13 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಘೋಷಿಸಿದ್ದಾರೆ.
ಇದಾದ ನಂತರ ಸಮಾಜವಾದಿ ಪಕ್ಷ “ಇಂಡಿಯಾ” ಮೈತ್ರಿಕೂಟದಿಂದ ಹಿಂದೆ ಸರಿದು, ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿತ್ತು.
ಈ ಹಿನ್ನಲೆಯಲ್ಲಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, “ಉತ್ತರ ಪ್ರದೇಶದಲ್ಲಿ ತೀವ್ರ ಪೈಪೋಟಿ ಇರುತ್ತದೆ ಎಂದು ನಿರೀಕ್ಷಿಸಿದ್ದ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಸುಗಮ ಒಪ್ಪಂದವಾಗಿದೆ” ಎಂದು ಹೇಳಿದ್ದಾರೆ.
ಒಟ್ಟು 80 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳು ಕಾಂಗ್ರೆಸ್‌ಗೆ ನೀಡಲಾಗಿದೆ. “ಉತ್ತರಪ್ರದೇಶದಲ್ಲಿ “ಇಂಡಿಯಾ” ಮೈತ್ರಿಕೂಟ ಗೆಲ್ಲುತ್ತದೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಮೈತ್ರಿಕೂಟದ ಅಂಗಪಕ್ಷವಾಗಿರುವ ರಾಷ್ಟ್ರಿಯ ಲೋಕದಳಕ್ಕೆ (ಆರ್‌ಎಲ್‌ಡಿ) ಈ ಹಿಂದೆ 7 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿತ್ತು ಎಂಬುದು ಗಮನಾರ್ಹ