ಸಂವಿಧಾನ ಉಳಿದು, ಪ್ರಜಾಪ್ರಭುತ್ವ ಗಟ್ಟಿಯಾದರೆ ದುಡಿಯುವವರಿಗೆ ಬದುಕಿನ ಅವಕಾಶಗಳು ದಕ್ಕುತ್ತವೆ: ಸಿದ್ದರಾಮಯ್ಯ » Dynamic Leader
October 11, 2024
ರಾಜ್ಯ

ಸಂವಿಧಾನ ಉಳಿದು, ಪ್ರಜಾಪ್ರಭುತ್ವ ಗಟ್ಟಿಯಾದರೆ ದುಡಿಯುವವರಿಗೆ ಬದುಕಿನ ಅವಕಾಶಗಳು ದಕ್ಕುತ್ತವೆ: ಸಿದ್ದರಾಮಯ್ಯ

ಪಟ್ಟಭದ್ರರು ಬಹಳ ಕೆಟ್ಟ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಸವಾದಿ ಶರಣರು 800 ವರ್ಷಗಳ ಹಿಂದೆಯೇ “ಇವ ನಮ್ಮವ ಇವ ನಮ್ಮವ” ಎಂದು ಕರೆದರೂ ಇವತ್ತಿಗೂ “ಇವನಾರವ ಇವನಾರವ” ಎನ್ನುವ ವ್ಯವಸ್ಥೆಯೇ ಮುಂದುವರೆದಿದೆ.

ಆದಿಮ‌ ಸಾಂಸ್ಕೃತಿಕ ಕೇಂದ್ರದ ಹುಣ್ಣಿಮೆ ಹಾಡು-200ರ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಮಾತನಾಡಿದರು. ಇದೇ ಸಂದರ್ಭದಲ್ಲಿ ಆದಿಮ ನಡೆದು ಬಂದ ಹಾದಿಯನ್ನು ದಾಖಲಿಸಿರುವ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ನಮ್ಮ ಸಂವಿಧಾನ ಉಳಿದು, ಪ್ರಜಾಪ್ರಭುತ್ವ ಗಟ್ಟಿಯಾದರೆ ಮಾತ್ರ ದುಡಿಯುವವರಿಗೆ ಬದುಕಿನ ಅವಕಾಶಗಳು ದಕ್ಕುತ್ತವೆ. ಇದನ್ನು ಜನ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಆದಿಮ ಸಾಂಸ್ಕೃತಿಕ ಚಳವಳಿ ಮೂಲಕ ಬದಲಾವಣೆಯ ಕೇಂದ್ರ ಆಗುತ್ತದೆ ಎಂಬ ಭಾವನೆ ನನ್ನದು. ಸಮ ಸಮಾಜ ಮತ್ತು ಮಾನವೀಯತೆಯ ಸಮಾಜವನ್ನು ಗಟ್ಟಿಗೊಳಿಸಬೇಕಾದ ಸಂದರ್ಭ ಇದಾಗಿದೆ ಎಂದು ಹೇಳಿದರು.

ಅಸಮಾನತೆ ದೈವ ಸೃಷ್ಟಿ ಅಲ್ಲ. ಮನುಷ್ಯ ಸೃಷ್ಟಿ. ಸಮಾಜದಲ್ಲಿ ಯಾರಿಗೆ ಅವಕಾಶಗಳು ಸಿಕ್ಕಿತೋ ಅವರು ಬಹುಜನರನ್ನು ಅವಕಾಶ ವಂಚಿತರನ್ನಾಗಿ ಮಾಡಿದರು. ಇದರಿಂದ ಅಸಮಾನತೆ ಸೃಷ್ಟಿಯಾಯಿತು. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಅಸಮಾನತೆಗೆ ತುತ್ತಾದರು ಎಂದು ಹೇಳಿದರು.

ಅಸಮಾನತೆಗೆ ತುತ್ತಾದವರು ಪ್ರಜಾತಂತ್ರದ ಸೌಧವನ್ನು ದ್ವಂಸ ಮಾಡ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದರು. ನಮ್ಮದು ಚಲನೆ ರಹಿತ ಜಾತಿ ವ್ಯವಸ್ಥೆ. ಆದ್ದರಿಂದ ಬುದ್ದನ ಕಾಲದಿಂದಲೂ ಜಾತಿ ವ್ಯವಸ್ಥೆ ವಿರುದ್ಧ ಪ್ರಜ್ಞೆ ಮೂಡಿಸಿದರೂ ಇನ್ನೂ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಲೇ ಇದೆ ಎಂದು ಅಸಮಾನತೆ ವ್ಯಕ್ತಪಡಿಸಿದರು.

ಪಟ್ಟಭದ್ರರು ಬಹಳ ಕೆಟ್ಟ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಸವಾದಿ ಶರಣರು 800 ವರ್ಷಗಳ ಹಿಂದೆಯೇ “ಇವ ನಮ್ಮವ ಇವ ನಮ್ಮವ” ಎಂದು ಕರೆದರೂ ಇವತ್ತಿಗೂ “ಇವನಾರವ ಇವನಾರವ” ಎನ್ನುವ ವ್ಯವಸ್ಥೆಯೇ ಮುಂದುವರೆದಿದೆ. ಸ್ವಾರ್ಥರು, ಅಧಿಕಾರಕ್ಕೆ ಅಂಟಿಕೊಳ್ಳುವವರು ಪಟ್ಟಭದ್ರರ ವ್ಯವಸ್ಥೆ ಜತೆಗೆ ರಾಜಿ ಮಾಡಿಕೊಳ್ಳುತ್ತಾರೆ. ಇದರಿಂದ ಸಮಾಜ ಸಾಕಷ್ಟು ನೋವು ತಿನ್ನುತ್ತದೆ. ಕಟ್ಟ ಕಡೆಯ ಮನುಷ್ಯನಿಗೆ ದಕ್ಕಬೇಕಾದ ಪಾಲನ್ನು ದಕ್ಕದಂತೆ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯಕ ಮಾಡುವವರು ಅವಕಾಶಗಳಿಂದ ವಂಚಿತರಾಗುತ್ತಾರೆ. ಯಾರು ಕಾಯಕ ಜೀವಿಗಳಲ್ಲವೋ ಅವರು ಸಂಪತ್ತನ್ನು ಅನುಭವಿಸುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಿ ಆಗಬೇಕು. ಉತ್ಪಾದನೆಯನ್ನು ಸಮವಾಗಿ ಹಂಚಿಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಶೋಷಣೆ ಮುಕ್ತ ಸಮಾಜ ಸೃಷ್ಟಿಯಾಗುತ್ತದೆ. ನಾನು ಮತ್ತು ನಮ್ಮ ಸರ್ಕಾರ ಶೋಷಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಭರವಸೆಯ ಮಾತಗಳನ್ನು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರುಗಳಾದ ನಂಜೇಗೌಡರು, ಕೊತ್ತನೂರು ಮಂಜುನಾಥ್, ಅನಿಲ್ ಕುಮಾರ್, ಮಾಜಿ ಸಭಾಪತಿ ಸುದರ್ಶನ್, ಮಾಜಿ ಸಚಿವರಾದ ಶ್ರೀನಿವಾಸ ಗೌಡ ಮತ್ತು ಆದಿಮ ಸಾಂಸ್ಕೃತಿಕ ಸಂಘಟನೆಯ ಪದಾಧಿಕಾರಿಗಳು, ಪೋಷಕರು ಮತ್ತು ದಲಿತ ಚಳವಳಿಯ ಹೋರಾಟಗಾರರು ಉಪಸ್ಥಿತರಿದ್ದರು.

Related Posts