ರಾಜ್ಯಪಾಲರು ಚುನಾಯಿತ ಪ್ರತಿನಿಧಿಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕು: ಸುಪ್ರೀಂ ಕೋರ್ಟ್! » Dynamic Leader
December 3, 2024
ದೇಶ

ರಾಜ್ಯಪಾಲರು ಚುನಾಯಿತ ಪ್ರತಿನಿಧಿಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕು: ಸುಪ್ರೀಂ ಕೋರ್ಟ್!

ಹೊಸದಿಲ್ಲಿ: ರಾಜ್ಯಪಾಲರು ಚುನಾಯಿತ ಪ್ರತಿನಿಧಿಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿದೆ. ಪಂಜಾಬ್ ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ತಮ್ಮ ಒಪ್ಪಿಗೆಯನ್ನು ನೀಡಲು ನಿರಾಕರಿಸುತ್ತಿದ್ದು, ವಿಧಾನಸಭೆ ಅಧಿವೇಶನ ಕರೆಯುವುದಕ್ಕೂ ಅಡೆತಡೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಈ ಪ್ರಕರಣವು ಇಂದು (ನವೆಂಬರ್ 06) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು. ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

ಆ ಸಮಯದಲ್ಲಿ ಚಂದ್ರಚೂಡ್ ಹೇಳಿದ್ದು, “ಮಸೂದೆಗಳನ್ನು ಅಂಗೀಕರಿಸುವ ಆದೇಶಕ್ಕಾಗಿ ರಾಜ್ಯ ಸರ್ಕಾರವು ನ್ಯಾಯಾಲಯಗಳನ್ನು ಸಂಪರ್ಕಿಸಬೇಕೇ? ಈ ವಿಷಯ ಸುಪ್ರೀಂ ಕೋರ್ಟ್‌ಗೆ ಬರುವ ಮುನ್ನವೇ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು. ಪ್ರಕರಣಗಳು ಸುಪ್ರೀಂ ಕೋರ್ಟ್ ಮುಂದೆ ಬಂದಾಗ ಮಾತ್ರ ರಾಜ್ಯಪಾಲರು ಕಾರ್ಯಪ್ರವೃತ್ತರಾಗವುದನ್ನು ತಪ್ಪಿಸಬೇಕು. ರಾಜ್ಯಪಾಲರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು; ನಾವು ಚುನಾಯಿತ ಪ್ರತಿನಿಧಿಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕು” ಎಂದರು.

ನಂತರ ಮಾತನಾಡಿದ ಸಾಲಿಸಿಟರ್ ಜನರಲ್, “ರಾಜ್ಯಪಾಲರು ತಮ್ಮ ಬಳಿ ಬಂದ ಮಸೂದೆಗಳ ಮೇಲೆ ಕ್ರಮ ಕೈಗೊಂಡಿದ್ದಾರೆ; ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಪಂಜಾಬ್ ಸರ್ಕಾರ ಸಲ್ಲಿಸಿರುವ ಅರ್ಜಿಯು ಅನಗತ್ಯ ಕಾನೂನು ಕ್ರಮವಾಗಿದೆ” ಎಂದು ಅವರು ಹೇಳಿದರು.

ಮುಂದುವರಿದು ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, “ರಾಜ್ಯಪಾಲರು ಕ್ರಮ ಕೈಗೊಂಡಿದ್ದಾರೆ ಎಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ವರದಿ ಸಲ್ಲಿಸುವುದಾಗಿಯೂ ಹೇಳಿದ್ದಾರೆ. ಈ ಪ್ರಕರಣ ಶುಕ್ರವಾರ ವಿಚಾರಣೆಗೆ ಬರಲಿದ್ದು, ಅಂದು ರಾಜ್ಯಪಾಲರು ಕೈಗೊಂಡಿರುವ ಕ್ರಮಗಳನ್ನು ನ್ಯಾಯಾಲಯ ಪರಿಶೀಲಿಸಲಿದೆ” ಎಂದು ಹೇಳಿ ಪ್ರಕರಣವನ್ನು ನವೆಂಬರ್ 10ಕ್ಕೆ ಮುಂದೂಡಿದರು.

Related Posts