ಪಾಕ್ ಆಟಗಾರನ ವಿರುದ್ಧ “ಜೈ ಶ್ರೀರಾಮ್” ಘೋಷಣೆ ಕೂಗಿದ ಭಾರತೀಯ ಅಭಿಮಾನಿಗಳು: ಸಚಿವ ಉದಯನಿಧಿ ಸ್ಟಾಲಿನ್ ಖಂಡನೆ!
ಚೆನ್ನೈ: ವಿಶ್ವ ಕಪ್ ಕ್ರಿಕೆಟ್‌ನ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಲೀಗ್ ಪಂದ್ಯವು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು.
ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ತಂಡವು 42.5 ಓವರ್‌ಗಳಲ್ಲಿ 191 ರನ್‌ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನ ತಂಡದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಉತ್ತಮ ಆರಂಭ ನೀಡಿದರು. ಪಂದ್ಯದ ವೇಳೆ ಅಭಿಮಾನಿಗಳು ಹಲವು ಬಾರಿ ಜಯಶ್ರೀರಾಮ್ ಘೋಷಣೆ ಕೂಗಿದರು.
ಮತ್ತು ಪಾಕಿಸ್ತಾನದ ಪ್ರಮುಖ ಆಟಗಾರ ‘ರಿಜ್ವಾನ್’ 49 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳಿದಾಗ ‘ಜಯಶ್ರೀರಾಮ್’ ಘೋಷಣೆಗಳು ಮೊಳಗಿದವು. ಇದನ್ನು ಹಲವರು ಟೀಕಿಸಿದ್ದಾರೆ. ಆಟವನ್ನು ಆಟವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ವೀಡಿಯೋವೊಂದನ್ನು ಹಂಚಿಕೊಂಡಿರುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, “ಆತಿಥ್ಯಕ್ಕೆ ಹೆಸರುವಾಸಿಯಾದ ಭಾರತದಲ್ಲಿ ಪಾಕಿಸ್ತಾನಿ ಆಟಗಾರರ ವಿರುದ್ಧ ಘೋಷಣೆಗಳು ಸ್ವೀಕಾರಾರ್ಹವಲ್ಲ. ಕ್ರೀಡೆ ಎಂಬುದು ರಾಷ್ಟ್ರಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಬೇಕು.
ಕ್ರೀಡೆಗಳು ಯಾವಾಗಲೂ ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷ ಹರಡಲು ಕ್ರೀಡೆಯನ್ನು ಸಾಧನವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ” ಎಂದು ಅಭಿಪ್ರಾಯಪಟ್ಟಿದ್ದಾರೆ.