ಕೇರಳದ 8 ಪೊಲೀಸ್ ಠಾಣೆಗಳನ್ನು ಸ್ಫೋಟಿಸಲು ಮಾವೋವಾದಿಗಳು ಯೋಜನೆ: ಗುಪ್ತಚರ ಎಚ್ಚರಿಕೆ! » Dynamic Leader
December 13, 2024
ದೇಶ

ಕೇರಳದ 8 ಪೊಲೀಸ್ ಠಾಣೆಗಳನ್ನು ಸ್ಫೋಟಿಸಲು ಮಾವೋವಾದಿಗಳು ಯೋಜನೆ: ಗುಪ್ತಚರ ಎಚ್ಚರಿಕೆ!

ತಿರುವನಂತಪುರಂ: ಕೇರಳದ 8 ಪೊಲೀಸ್ ಠಾಣೆಗಳನ್ನು ಸ್ಫೋಟಿಸಲು ಮಾವೋವಾದಿಗಳು ಮುಂದಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಪೊಲೀಸ್ ಠಾಣೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.  ಕೇರಳ ರಾಜ್ಯದ ಕೋಳಿಕೋಡ್, ಮಲಪ್ಪುರಂ, ಪತ್ತನಂತಿಟ್ಟ ಮತ್ತು ಕಣ್ಣೂರು ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಮಾವೋವಾದಿಗಳು ಸಕ್ರಿಯರಾಗಿದ್ದಾರೆ.

ಆಗಾಗ ಊರಿಗೆ ಬಂದು ಸಾರ್ವಜನಿಕರಿಂದ ಆಹಾರ ಪದಾರ್ಥಗಳನ್ನು ಖರೀದಿಸಿಕೊಂಡು ಹೋಗುವುದನ್ನು ವಾಡಿಕೆಯಾಗಿಸಿಕೊಂಡಿರುವ ಮಾವೋವಾದಿಗಳು, ಪೊಲೀಸ್ ಠಾಣೆಗಳು, ಅರಣ್ಯ ಇಲಾಖೆ ಕಚೇರಿ ಸೇರಿದಂತೆ ಸರಕಾರಿ ಕಚೇರಿಗಳ ಮೇಲೆ ದಾಳಿಯನ್ನೂ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹಲವು ಬಾರಿ ಮಾವೋವಾದಿಗಳಿಗೂ ಕೇರಳ ಕಾರ್ಯಪಡೆ ಪೊಲೀಸರಿಗೂ ಗುಂಡಿನ ಚಕಮಕಿ ನಡೆದಿರುತ್ತದೆ. ಹಲವು ಮಾವೋವಾದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಈ ಹಿನ್ನಲೆಯಲ್ಲಿ, ವಯನಾಡ್ ಜಿಲ್ಲೆಯ ಕಂಬಮಲೈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳು ಆಗಾಗ್ಗೆ ಭೇಟಿ ನೀಡುತ್ತಿರುವುದು ಕಳೆದ ಕೆಲವು ದಿನಗಳಿಂದ ಸಂಚಲನ ಮೂಡಿಸಿದೆ. ಬಳಿಕ ಪೊಲೀಸ್ ಕಾರ್ಯಪಡೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಕೋಳಿಕೋಡ್ ಜಿಲ್ಲೆಯ 8 ಪೊಲೀಸ್ ಠಾಣೆಗಳನ್ನು ಸ್ಫೋಟಿಸಲು ಮಾವೋವಾದಿಗಳು ಮುಂದಾಗಿದ್ದಾರೆ ಎಂಬ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಸಂಚಲನ ಮೂಡಿಸಿದೆ.

ಕೋಳಿಕೋಡ್ ಜಿಲ್ಲೆಯ ವಳಯಂ, ಕುಟ್ರಿಯಾಡಿ, ತೊಟ್ಟಿಲ್ ಬಾಲಂ, ಪೆರುವನ್ನಾಮೂಳಿ, ಕೂರಾಚ್ಚುಂಡು, ತಾಮರಚೇರಿ, ತಿರುವಂಬಾಡಿ ಮತ್ತು ಕೋಟ್ಟಚೇರಿ ಪೊಲೀಸ್ ಠಾಣೆಗಳನ್ನು ಮಾವೋವಾದಿಗಳು ಸ್ಫೋಟಿಸುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ.

ಇದನ್ನು ಅನುಸರಿಸಿ, ಸದರಿ ಪೊಲೀಸ್ ಠಾಣೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶದ ಮೂಲಕ ಕೋಳಿಕೋಡ್ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಮಾವೋವಾದಿಗಳು ಸುಲಭವಾಗಿ ಬರುವ ಸಾಧ್ಯತೆ ಇರುವುದರಿಂದ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ತೀವ್ರಗೊಳಿಸಲು ಕೇರಳ ಕಾರ್ಯಪಡೆ ಯೋಜನೆ ರೂಪಿಸಿದೆ.

Related Posts