ಆಗ್ನೇಯ ಏಷ್ಯಾದ ಸಾಕ್ರಟೀಸ್, ಸಮಾಜ ಸುಧಾರಣಾ ಚಳವಳಿಯ ಪಿತಾಮಹ ತಂದೆ ಪೆರಿಯಾರ್ ಜನ್ಮ ದಿನಾಚರಣೆ ಇಂದು! » Dynamic Leader
October 4, 2024
ದೇಶ

ಆಗ್ನೇಯ ಏಷ್ಯಾದ ಸಾಕ್ರಟೀಸ್, ಸಮಾಜ ಸುಧಾರಣಾ ಚಳವಳಿಯ ಪಿತಾಮಹ ತಂದೆ ಪೆರಿಯಾರ್ ಜನ್ಮ ದಿನಾಚರಣೆ ಇಂದು!

ಡಿ.ಸಿ.ಪ್ರಕಾಶ್ ಸಂಪಾದಕರು

ತಂದೆ ಪೆರಿಯಾರ್ (ಈರೋಡ್ ವೆಂಕಟಪ್ಪ ರಾಮಸ್ವಾಮಿ):
ಅವರು ತಮಿಳುನಾಡು ಈರೋಡ್‌ನಲ್ಲಿ 1879ರ ಸೆಪ್ಟೆಂಬರ್ 17 ರಂದು ವೆಂಕಟಪ್ಪ ನಾಯಕರ್ ಮತ್ತು ಚಿನ್ನತಾಯಿ ದಂಪತಿಗಳ ಮಗನಾಗಿ ಜನಿಸಿದರು. ಪೆರಿಯಾರ್ ಅವರ ಮಾತೃಭಾಷೆ ಕನ್ನಡವಾದರು ಅವರು ತಮಿಳು, ತೆಲುಗು ಮತ್ತು ಕನ್ನಡ ಮೂರು ದ್ರಾವಿಡ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. 1915ರಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಪೆರಿಯಾರ್ ಈರೋಡ್‌ನಲ್ಲಿ ಬ್ರಾಹ್ಮಣೇತರ ಕಾಂಗ್ರೆಸ್ ಸಮ್ಮೇಳನವನ್ನು ನಡೆಸಿದರು.

1918ರಲ್ಲಿ ಈರೋಡ್ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 1919ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 1920ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. 1921ರಲ್ಲಿ ಪೆರಿಯಾರ್ ಅವರ ಪತ್ನಿ ನಾಗಮ್ಮ ಮತ್ತು ಅಕ್ಕ ಕಣ್ಣಮ್ಮ ಅವರೊಂದಿಗೆ ಈರೋಡ್‌ನಲ್ಲಿ ನಡೆದ ಸೇಂದಿ ಅಂಗಡಿ ಮುಷ್ಕರದಲ್ಲಿ ಭಾಗವಹಿಸಿದರು. ಈ ಸೇಂದಿ ಅಂಗಡಿ ಮುಷ್ಕರದ ಸಮಯದಲ್ಲಿ, ಅವರು ತಮ್ಮ ಸ್ವಂತ ತೋಪಿನಲ್ಲಿದ್ದ 1000 ತೆಂಗಿನ ಮರಗಳನ್ನು ಕಡಿದು ಹಾಕಿದರು.

1922ರಲ್ಲಿ ಮದ್ರಾಸ್ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ನಡೆದ ಸಭೆಯಲ್ಲಿ ತಿರುಪ್ಪೂರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಮಾರ್ಚ್ 3, 1924ರಂದು, ಕೇರಳ ರಾಜ್ಯದ ವೈಕಂ ಎಂಬ ಪಟ್ಟಣದಲ್ಲಿ, ದಲಿತ ಜನರಿಗಾಗಿ ದೇವಾಲಯ ಪ್ರವೇಶಕ್ಕಾಗಿ ಪ್ರತಿಭಟನೆಯನ್ನು ಮಾಡಿ ಯಶಸ್ವಿಯಾದರು. ಹೀಗಾಗಿ ಅವರನ್ನು ‘ವೈಕಂ ವೀರ’ ಎಂದು ಕರೆಯಲಾಗುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಬ್ರಾಹ್ಮಣೇತರರ ಹಿತಾಸಕ್ತಿ ಕಾಪಾಡಲು 1924ರ ಮೇ 2ರಂದು ‘ಕುಡಿಅರಸು’ (Republic) ಎಂಬ ತಮಿಳು ವಾರಪತ್ರಿಕೆಯನ್ನು ಆರಂಭಿಸಿದರು. 1925ರಲ್ಲಿ ವಿವಿಎಸ್ ಅಯ್ಯರ್ ಅವರ ಚೇರನ್ ಮಾದೇವಿ ಗುರುಕುಲದಲ್ಲಿ ಚಾಲ್ತಿಯಲ್ಲಿದ್ದ ವರುಣಾಶ್ರಮ ಕ್ರಮವನ್ನು ಪೆರಿಯಾರ್ ವಿರೋಧಿಸಿದರು. ನವೆಂಬರ್ 1925ರಲ್ಲಿ ಕಾಂಚಿಪುರಂನಲ್ಲಿ ತಿರು ವಿಕ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸಮ್ಮೇಳನದಲ್ಲಿ ಪೆರಿಯಾರ್ ಮಂಡಿಸಿದ ಜಾತಿವಾರು ಪ್ರಾತಿನಿಧ್ಯದ ಬೇಡಿಕೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿದಾಗ ಪೆರಿಯಾರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.

1925ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಅವರು ಸ್ವಾಭಿಮಾನ ಚಳವಳಿಯನ್ನು ಪ್ರಾರಂಭಿಸಿದರು. 1929ರಲ್ಲಿ ಚೆಂಗಲ್ಪಟ್ಟುವಿನಲ್ಲಿ ಸ್ವಾಭಿಮಾನ ಚಳವಳಿಯ ಮೊದಲ ಸಮ್ಮೇಳನ ನಡೆಯಿತು. ಸೌಂದರ ಪಾಂಡ್ಯನಾರ್, ಕುತ್ತೂಸಿ ಗುರುಸ್ವಾಮಿ, ಮೂವಲೂರು ರಾಮಾಮೃತಂ ಅಮ್ಮಯಾರ್ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು. 1926ರಲ್ಲಿ, ಅವರು “ದ್ರಾವಿಡನ್” ಪತ್ರಿಕೆಯ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು. ನವೆಂಬರ್ 7, 1928 ರಂದು “ರಿವೋಲ್ಟ್” (Revolt) ಎಂಬ ಇಂಗ್ಲಿಷ್ ಪತ್ರಿಕೆಯನ್ನು ಪ್ರಾರಂಭಿಸಿದರು.

ಜನವರಿ 1930ರಲ್ಲಿ, ಕುಟುಂಬ ಯೋಜನೆ ಕುರಿತು ಪುಸ್ತಕವನ್ನು ಪ್ರಕಟಿಸಿ, ಭಾರತದಲ್ಲಿ ಮೊದಲ ಬಾರಿಗೆ ಜನಸಂಖ್ಯೆ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಿದರು. 1933ರಲ್ಲಿ ‘ಕುಡಿಅರಸು’ ವಾರ ಪತ್ರಿಕೆಯನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದ ಕಾರಣ, 20.11.1933 ರಂದು ಅವರು “ಪುರಟ್ಚಿ” (ಕ್ರಾಂತಿ) ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1934 ರಿಂದ ಜಸ್ಟೀಸ್ ಪಾರ್ಟಿಯನ್ನು ಬೆಂಬಲಿಸಲು ಪ್ರಾರಂಭಿಸಿದ ಪೆರಿಯಾರ್, ಜನವರಿ 12, 1934 ರಂದು ‘ಪಗುತ್ತರಿವು’ (ವಿಚಾರವಾದ)  ಎಂಬ ತಮಿಳು ವಾರಪತ್ರಿಕೆಯನ್ನು ಪ್ರಕಟಿಸಿದರು. ಜೂನ್ 1, 1935 ರಂದು ಜಸ್ಟೀಸ್ ಪಾರ್ಟಿಯಿಂದ ಪ್ರಾರಂಭವಾದ ‘ವಿಡುದಲೈ’ (ವಿಮೋಚನೆ) ವಾರ ಪತ್ರಿಕೆಯನ್ನು ಪೆರಿಯಾರ್ ಜನವರಿ 1, 1937 ರಂದು ದಿನಪತ್ರಿಕೆಯಾಗಿ ಪ್ರಕಟಿಸಿದರು.

1937ರಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ರಾಜಾಜಿ ಸರ್ಕಾರದಿಂದ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಜೈಲಿಗೆ ಹೋಗಿದ್ದರು. ನವೆಂಬರ್ 13, 1938 ರಂದು, ಮರೈಮಲೈ ಅಡಿಗಳ್ ಅವರ ಪುತ್ರಿ ನೀಲಾಂಬಿಕೆ ಅಮ್ಮಯಾರ್ ನೇತೃತ್ವದಲ್ಲಿ ಚೆನ್ನೈನಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ, ಅವರಿಗೆ “ಪೆರಿಯಾರ್” ಎಂಬ ಬಿರುದು ನೀಡಲಾಯಿತು. ಡಿಸೆಂಬರ್ 29, 1938 ರಂದು ಜಸ್ಟೀಸ್ ಪಕ್ಷದ ನಾಯಕರಾದರು. 1939ರಲ್ಲಿ, ದ್ರಾವಿಡ ಜನಾಂಗೀಯ ಏಕತಾ ಸಮ್ಮೇಳನದ ಮೂಲಕ ದ್ರಾವಿಡ ರಾಷ್ಟ್ರದ ಬೇಡಿಕೆಯನ್ನು ಎತ್ತಿದರು.

ಆಗಸ್ಟ್ 27, 1944 ರಂದು, ಸೇಲಂನಲ್ಲಿ ಜಸ್ಟೀಸ್ ಪಾರ್ಟಿ ಸಮ್ಮೇಳನದಲ್ಲಿ, ಅಣ್ಣಾದುರೈ ಅವರ ನಿರ್ಣಯದ ಪ್ರಕಾರ, ಜಸ್ಟೀಸ್ ಪಾರ್ಟಿಯ ಹೆಸರನ್ನು “ದ್ರಾವಿಡರ್ ಕಳಗಂ” ಎಂದು ಬದಲಾಯಿಸಲಾಯಿತು. 1957ರಲ್ಲಿ ಜಾತಿ ನಿರ್ಮೂಲನೆಗಾಗಿ ಭಾರತದ ನಕ್ಷೆಯನ್ನು ಸುಡಲಾಯಿತು ಮತ್ತು ದೇವಸ್ಥಾನಗಳಲ್ಲಿ ಜಾತಿ ಪ್ರಾಬಲ್ಯವನ್ನು ಕೊನೆಗಾಣಿಸಲು ಚಳುವಳಿಯನ್ನು ನಡೆಸಿದರು. 1970ರಲ್ಲಿ ಉನ್ಮಯ್ (ಸತ್ಯ) ಎಂಬ ಪಾಕ್ಷಿಕ ಪತ್ರಿಕೆಯನ್ನು ತಿರುಚ್ಚಿಯಿಂದ ಪ್ರಾರಂಭಿಸಿದರು. ಇವರು 1970ರಲ್ಲಿ ಎಲ್ಲಾ ಜಾತಿಯವರೂ ಅರ್ಚಕರಾಗಿಸುವ ಹೋರಾಟವನ್ನು ಮುನ್ನಡೆಸಿದರು.

ಸಮಾಜಕ್ಕೆ ಅವರ ಕೊಡುಗೆಯನ್ನು ಶ್ಲಾಘಿಸಿ, ಜೂನ್ 27, 1970 ರಂದು ವಿಶ್ವಸಂಸ್ಥೆಯ ಯುನೆಸ್ಕೋ “ಆಧುನಿಕ ಪ್ರಪಂಚದ ದಾರ್ಶನಿಕ”, “ಆಗ್ನೇಯ ಏಷ್ಯಾದ ಸಾಕ್ರಟೀಸ್”, “ಸಮಾಜ ಸುಧಾರಣಾ ಚಳವಳಿಯ ಪಿತಾಮಹ” ಅಜ್ಞಾನ, ಮೂಢನಂಬಿಕೆ, ಅರ್ಥಹೀನ ಆಚರಣೆಗಳು ಮತ್ತು ಪದ್ಧತಿಗಳ ಶತ್ರು ಎಂದು ಮೆಚ್ಚುಗೆ ಸೂಚಿಸಿ ಪ್ರಮಾಣ ಪತ್ರ ನೀಡಿದೆ.

ಮಹಿಳಾ ಹಕ್ಕು:
ಮಹಿಳೆಯರು ಪುರುಷರುಗಿಂತ ಕೀಳಲ್ಲ ಎಂದು ಭಾವಿಸಿದವರು ಪೆರಿಯಾರ್. ಮಹಿಳೆಯರು ಪುರುಷ ಸಮಾಜದ ಗುಲಾಮರಾಗದೇ, ಮಾನವ ಸಮಾಜಕ್ಕೆ ಕೊಡುಗೆ ನೀಡುವ ಖ್ಯಾತ ಮಹಿಳೆಯರಾಗಬೇಕು ಎಂದು ಅವರು ಒತ್ತಯಿಸುತ್ತಿದ್ದರು.

ಆಸ್ತಿ ಹಕ್ಕುಗಳು:
ಮಹಿಳೆಯರಿಗೆ ಆಸ್ತಿ ಹಕ್ಕು ನಿರಾಕರಣೆಯೇ ಅವರ ಗುಲಾಮಗಿರಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ಅದಕ್ಕಾಗಿ ಮಹಿಳೆಯರು ಸಂಘಟಿತ ಹೋರಾಟ ನಡೆಸಬೇಕು ಎಂದರು.

ಸರ್ಕಾರಿ ಕೆಲಸ:
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮಹಿಳೆಯರು ಕೆಲಸ ಮಾಡಿದಾಗ ನಮ್ಮ ಸಮಾಜದಲ್ಲಿ ಕ್ರಾಂತಿಯಾಗುತ್ತದೆ ಎಂದರು.

ಬಾಲ್ಯ ವಿವಾಹ:
ಬಾಲ್ಯ ವಿವಾಹದ ಬಗ್ಗೆ “ಸ್ಲೇಟು ಒಡೆದು ಆಡುವ ಸಮಯದಲ್ಲಿ, ಹೆತ್ತವರು ಮಾಡಿದ ಸಂಕಟದ ಆಟ” ಎಂದು ಹೇಳಿ ಅದನ್ನು ತಡೆಯಲು ಪ್ರಯತ್ನಿಸಿದರು.

ವರದಕ್ಷಿಣೆ ನಿರಾಕರಣೆ ಮತ್ತು ವಿಧವಾ ಪದ್ಧತಿ ನಿರ್ಮೂಲನೆ:
ಸಮಾಜದಲ್ಲಿ ಸರಿಯಾದ ಪ್ರೀತಿ, ತ್ಯಾಗ, ಪ್ರಜ್ಞೆ ಇದ್ದರೆ ಮಾತ್ರ ಇಂತಹ ಅನಿಷ್ಟಗಳು ನಿರ್ಮೂಲನೆ ಸಾಧ್ಯ. ಯುವಕರು, ವಿದ್ಯಾರ್ಥಿಗಳು ಮತ್ತು ಪದವೀಧರರು ಎತ್ತಿನ ಗಾಣದಂತೆ ಆಗದೆ ರೇಸು ಕುದುರೆಗಳಾಗಬೇಕು. ಕಷ್ಟಪಟ್ಟು ದುಡಿದು ಮುನ್ನಡೆಯುವ ಉದಾತ್ತ ಚಿಂತನೆ ನಮ್ಮ ಯುವಕರಲ್ಲಿ ಬೆಳೆಯಬೇಕು. ಪತಿಯನ್ನು ಕಳೆದುಕೊಂಡವರು ಮರುಮದುವೆ ಮಾಡಿಕೊಳ್ಳುವುದು ತಪ್ಪಿಲ್ಲ ಎಂದರು.

ಶಿಸ್ತು:
ನೈತಿಕತೆ ಮತ್ತು ಪರಿಶುದ್ಧತೆ ಹೆಣ್ಣಿಗಷ್ಟೇ ಅಲ್ಲ, ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಾಮಾನ್ಯವಾಗಿದೆ ಎಂದರು. ಮಹಿಳೆಯರು ಸಮಾಜದ ಕಣ್ಣುಗಳು ಎಂದು ಪೆರಿಯಾರ್ ನಂಬಿದ್ದರು.

ವೈಚಾರಿಕತೆ:
ಪೆರಿಯಾರ್ ಎಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಅವರ ವೈಚಾರಿಕತೆಯ ತತ್ವ. ವೈಜ್ಞಾನಿಕ ದೃಷ್ಟಿಕೋನದಿಂದ ಎಲ್ಲವನ್ನೂ ಸಮೀಪಿಸಿ, ಏಕೆ? ಹೇಗೆ? ಎಂದು ಪ್ರಶ್ನೆಗಳನ್ನು ಎತ್ತಿ, ಜ್ಞಾನದ ಮೂಲಕ ಯೋಚಿಸಿ, ನಿರ್ಧಾರವನ್ನು ತೆಗೆದುಕೊಳ್ಳುವುದೇ ವೈಚಾರಿಕತೆ. ನಮ್ಮ ಪೂರ್ವಜರು ಅದನ್ನು ಮಾಡಿದರು ಎಂಬ ಕಾರಣಕ್ಕೆ ನಾವು ಇಂದು ಅದನ್ನು ಅನುಸರಿಸಬಾರದು. ಅವರು ಕಾಲಕ್ಕೆ ತಕ್ಕಂತೆ ಮಾಡುತ್ತಿದ್ದರು; ಇಂದು ಕಾಲ ಬದಲಾಗಿದೆ. ಆಧುನಿಕ ಯುಗದ ಬೆಳವಣಿಗೆಗೆ ಅನುಗುಣವಾಗಿ, ಜ್ಞಾನದ ಸ್ಥಿತಿಯಲ್ಲಿ ಪ್ರಾಯೋಗಿಕ ರೀತಿಯಲ್ಲಿ ನಾವು ವರ್ತಿಸಬೇಕು.

ಪೆರಿಯಾರ್ ಆ ದೃಷ್ಟಿಕೋನದಿಂದ ಚಿಂತಿಸಿದರು. ಅವರ ಚಿಂತನೆಯು ಸಮಾಜ, ಭಾಷೆ, ಶಿಕ್ಷಣ, ಸಂಸ್ಕೃತಿ ಮತ್ತು ಆರ್ಥಿಕತೆಯಂತಹ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಆಯಾಮವನ್ನು ಉಂಟುಮಾಡಿತು.

ಸಮಾಜ:
ತಂದೆ ಪೆರಿಯಾರ್ ಅವರ ಜೀವಿತಾವಧಿಯಲ್ಲಿ ಸಮಾಜದಲ್ಲಿ ಜಾತಿ ಮತ್ತು ಧರ್ಮದ ವಿಭಜನೆಗಳು ತಾಂಡವವಾಡುತ್ತಿದ್ದವು. ಹುಟ್ಟಿನ ಆಧಾರದ ಮೇಲೆ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ವ್ಯತ್ಯಾಸವಿತ್ತು. ಜಾತಿಯ ಹೆಸರಿನಲ್ಲಿ ಪರಸ್ಪರ ನಿಂದಿಸುವ ಕ್ರೌರ್ಯ ನಡೆದಿತ್ತು. ಈ ಅವಮಾನದಿಂದ ತಂದೆ ಪೆರಿಯಾರ್ ಕೋಪಗೊಂಡಿದ್ದರು. “ಜಾತಿ ಪ್ರಜ್ಞೆಯು ಪ್ರಾಬಲ್ಯದ ಭಾವನೆಯನ್ನು ಬೆಳೆಸುತ್ತದೆ. ಇತರರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಮನುಷ್ಯರನ್ನು ಅವಮಾನಿಸುತ್ತದೆ. ಆ ಜಾತಿ ರಚನೆ ಒಡೆಯಬೇಕು’’ ಎಂದರು. ಜಾತಿಯಿಂದ ಮಾನವನ ಬದುಕಿಗೆ ಯಾವುದೇ ಪ್ರಯೋಜನವಿಲ್ಲ. ಅದರಿಂದ ನಿರರ್ಥಕ ಜಗಳಗಳು ಮತ್ತು ಗೊಂದಲಗಳು ಮೇಲುಗೈ ಸಾಧಿಸುತ್ತವೆ. ಅಂತಹ ಜಾತಿ, ಮನುಷ್ಯನಿಗೆ ಅಗತ್ಯವಿಲ್ಲ ಎಂದು ಅವರು ಒತ್ತಾಯಿಸಿದರು.

ಧರ್ಮ:
ಧರ್ಮಗಳು ಮಾನವ ಸಮಾಜದ ಕಲ್ಯಾಣಕ್ಕಾಗಿ ರಚಿಸಲಾಗಿದೆ. ಆದರೆ ಇಂದು ಧರ್ಮದ ಸ್ಥಿತಿ ಹೇಗಿದೆ? ಎಚ್ಚರಿಕೆಯಿಂದ ಯೋಚಿಸಿ: ಮನುಷ್ಯರಿಗಾಗಿ ಧರ್ಮವೇ? ಧರ್ಮಕ್ಕಾಗಿ ಮನುಷ್ಯರೇ? ಧರ್ಮವೆಂದರೆ ಜನರನ್ನು ಒಗ್ಗೂಡಿಸುವುದಕ್ಕಾಗಿಯೇ? ಅಥವಾ ಪ್ರತ್ಯೇಕಗೊಳಿಸುವುದಕ್ಕಾಗಿಯೇ?’ ಪೆರಿಯಾರ್ ಈ ರೀತಿಯ ತರ್ಕಬದ್ಧ ಪ್ರಶ್ನೆಗಳನ್ನು ಎತ್ತಿದರು; ದೇವರು ನಿರಾಕರಣೆ ತತ್ವವನ್ನು ಪಾಲಿಸಿದರು.

ಶಿಕ್ಷಣ:
ಪೆರಿಯಾರ್ ಶಿಕ್ಷಣವನ್ನು ಸಾಮಾಜಿಕ ಅಭಿವೃದ್ಧಿಗೆ ಅತ್ಯುತ್ತಮ ಸಾಧನವೆಂದು ಪರಿಗಣಿಸಿದರು. ‘ಕಲಿಸಿದ ಶಿಕ್ಷಣವು ಜನರಲ್ಲಿ ವಿವೇಚನೆ, ಸ್ವಾಭಿಮಾನ ಮತ್ತು ಸದ್ಗುಣವನ್ನು ಬೆಳೆಸಬೇಕು; ಶ್ರೇಷ್ಠತೆಯ ಜೀವನವು ಬದುಕುವುದಕ್ಕಾಗಿ ವೃತ್ತಿ ಮಾಡಿ, ಕಚೇರಿಯಲ್ಲಿ ಕೆಲಸ ಮಾಡಲು ಬಳಸಿಕೊಳ್ಳಬೇಕು’ ಎಂದರು. ‘ಶಾಲೆಗಳು ಅವೈಜ್ಞಾನಿಕ ಸಂದೇಶಗಳು ಮತ್ತು ಮೂಢನಂಬಿಕೆಗಳನ್ನು ಕಲಿಸಬಾರದು, ಆತ್ಮಾವಲೋಕನ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸುವ ಶಿಕ್ಷಣವನ್ನು ಕಲಿಸಬೇಕು’ ಎಂದು ಪೆರಿಯಾರ್ ವಾದಿಸಿದರು.

‘ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡಬೇಕು. ಕೆಲವು ವರ್ಗಗಳಿಗೆ ಮಾತ್ರ ಶಿಕ್ಷಣದ ಹಕ್ಕಿದೆ ಮತ್ತು ಕೆಲವು ವರ್ಗಗಳಿಗೆ ಶಿಕ್ಷಣದ ಹಕ್ಕಿಲ್ಲ ಎಂಬ ಕಲ್ಪನೆಯನ್ನು ಪೆರಿಯಾರ್ ಕಟುವಾಗಿ ವಿರೋಧಿಸಿದರು. ಎಲ್ಲರಿಗೂ ಶಿಕ್ಷಣ ನೀಡಬೇಕು.ವಿಶೇಷವಾಗಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ಮಹಿಳೆಯರಿಗೆ ಶಿಕ್ಷಣ ನೀಡುವುದರಿಂದ ಸಮಾಜವು ವೇಗವಾಗಿ ಪ್ರಗತಿ ಹೊಂದುತ್ತದೆ ಎಂದು ಪೆರಿಯಾರ್ ನಂಬಿದ್ದರು. ಕಂಠಪಾಠಕ್ಕೆ ಆದ್ಯತೆ ನೀಡುವ ಪರೀಕ್ಷಾ ಪದ್ಧತಿ ಮತ್ತು ಅಂಕಗಳಿಗೆ ಆದ್ಯತೆ ನೀಡುವ ಪದ್ಧತಿಯನ್ನು ಪೆರಿಯಾರ್ ಕಟುವಾಗಿ ವಿರೋಧಿಸಿದರು.

ಸ್ತ್ರೀ ಶಿಕ್ಷಣ:
ಮಹಿಳೆಯರು ಶಿಕ್ಷಣ ಪಡೆಯದ ಹೊರತು ಸಾಮಾಜಿಕ ಬದಲಾವಣೆಗಳು ಆಗುವುದಿಲ್ಲ ಎಂದರು. ಪುರುಷರು ಮಹಿಳೆಯರಿಗೆ ಶಿಕ್ಷಣ ನೀಡಬೇಕು. ಅವರಿಗೆ ಲೌಕಿಕ ಶಿಕ್ಷಣ ಮತ್ತು ಸಂಶೋಧನಾ ಶಿಕ್ಷಣವನ್ನು ಉದಾರವಾಗಿ ನೀಡಬೇಕು. ದೇಶದಲ್ಲಿರುವ ಅನಿಷ್ಟಗಳಿಗೆಲ್ಲ ದೊಡ್ಡ ಅನಿಷ್ಟ ಎಂದರೆ ಹೆಣ್ಣನ್ನು ವಿವೇಚನಾರಹಿತ ಜೀವಿಗಳನ್ನಾಗಿ ಇಟ್ಟುಕೊಂಡಿರುವ ಕ್ರೌರ್ಯವೇ ಆಗಿದೆ. ಈ ಪರಿಸ್ಥಿತಿ ಹೋಗಲಾಡಿಸಬೇಕು ಎಂದರು.

ಪೆರಿಯಾರ್ ವಿರೋಧಿಸಿದ್ದು:
ಹಿಂದಿ ಹೇರಿಕೆ, ಕುಲ ಶಿಕ್ಷಣಾ ನೀತಿ, ದೇವದಾಸಿ ಪದ್ಧತಿ, ಮದ್ಯಪಾನ, ಬಾಲ್ಯ ವಿವಾಹ ಮತ್ತು ವರದಕ್ಷಿಣೆ.

ಭಾಷೆ, ಸಾಹಿತ್ಯ:
ಭಾಷೆಯ ಅವಶ್ಯಕತೆಯು ಅದರ ಬಳಕೆಯ ವಿಧಾನವನ್ನು ಅವಲಂಬಿಸಿರುತ್ತದೆ; ಭಾಷೆ, ಪುಸ್ತಕ, ಸಾಹಿತ್ಯ ಯಾವುದೇ ಇದ್ದರೂ ಮನುಷ್ಯನಿಗೆ ಘನತೆ, ವೈಚಾರಿಕತೆ, ಬೆಳವಣಿಗೆ ಮತ್ತು ಸದ್ಗುಣಗಳನ್ನು ನೀಡಬೇಕು ಎಂದು ಭಾವಿಸಿ ಭಾಷೆ, ಸಾಹಿತ್ಯದ ಬೆಳವಣಿಗೆಯ ಬಗ್ಗೆಯೂ ಪೆರಿಯಾರ್ ಹೇಳಿದ್ದಾರೆ. ಧರ್ಮ ಮತ್ತು ದೇವರಿಗೆ ಸಂಬಂಧವಿಲ್ಲದ ಸಾಹಿತ್ಯ, ಎಲ್ಲರಿಗೂ ಸಾಮಾನ್ಯವಾದ ನೈಸರ್ಗಿಕ ಜ್ಞಾನವನ್ನು ನೀಡುವ ಸಾಹಿತ್ಯ, ಯಾರೂ ನಿರಾಕರಿಸಲಾಗದ ವಿಜ್ಞಾನದ ಸಾಹಿತ್ಯ ಇವುಗಳಿಂದ ಮಾತ್ರ ಒಂದು ಭಾಷೆ ಮತ್ತು ಅದರ ಸಾಹಿತ್ಯ ಉನ್ನತವಾಗತ್ತದೆ.

ಅದರೊಂದಿಗೆ ಅದನ್ನು ನಿಭಾಯಿಸುವವರು ಜಾಣರಾಗುತ್ತಾರೆ ಎಂದು ಪೆರಿಯಾರ್ ಹೇಳಿದರು. ಪೆರಿಯಾರ್ ತಿರುಕ್ಕುರಳ್ ಅನ್ನು ಅಮೂಲ್ಯವಾದ ಪುಸ್ತಕವೆಂದು ಪರಿಗಣಿಸಿದ್ದಾರೆ. ಏಕೆಂದರೆ, ಇದು ಎಲ್ಲರಿಗೂ ಸಾಮಾನ್ಯವಾದ ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ತತ್ವಶಾಸ್ತ್ರಗಳನ್ನು ಒಳಗೊಂಡಿದೆ. ರಾಜಕೀಯ, ಸಮಾಜ, ಆರ್ಥಿಕತೆ ಸೇರಿದಂತೆ ಎಲ್ಲವನ್ನೂ ಈ ಪುಸ್ತಕ ಒಳಗೊಂಡಿದೆ ಇದನ್ನು ಕಲಿತವರಿಗೆ ಸ್ವಾಭಿಮಾನ ಮೂಡುತ್ತದೆ ಎಂದರು.

ಮಹಿಳೆಯರ ಕಲ್ಯಾಣ:
ಆ ಕಾಲದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತುಳಿತಕ್ಕೊಳಗಾಗಿದ್ದರು. ಆದ್ದರಿಂದ ದೇಶ ವಿಮೋಚನೆಗಿಂತ ಮಹಿಳಾ ವಿಮೋಚನೆ ಮುಖ್ಯ ಎಂದು ಪೆರಿಯಾರ್ ಮನಗಂಡರು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ-ಪುರುಷರಿಗೆ ಸಮಾನವಾದ ಹಕ್ಕುಗಳನ್ನು ನೀಡಬೇಕು. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು. ಮಹಿಳೆಯರು ಆರ್ಥಿಕವಾಗಿ ಇತರರ ಮೇಲೆ ಅವಲಂಬಿತರಾಗಬಾರದು. ಸುಶಿಕ್ಷಿತರಾಗಿ, ಸ್ವಂತ ದುಡಿಮೆಯಲ್ಲಿ, ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಬೇಕು. ಸ್ಪಷ್ಟ ಜ್ಞಾನದಿಂದ ಹಾಗೂ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳಬೇಕು ಎಂದರು.

ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬಾರದು; ವಿಧವೆಯರು ಮರುಮದುವೆಯಾಗಲು ದಾರಿ ಮಾಡಿಕೊಡಬೇಕು ಎಂಬ ವಿಚಾರವನ್ನು ಒತ್ತಿ ಹೇಳಿದರು. ಕುಟುಂಬದಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಮಹಿಳೆಯರಿಗೂ ನೀಡಬೇಕು. ಮಹಿಳೆಯರ ಅಭಿಪ್ರಾಯಗಳನ್ನೂ ಗೌರವಿಸಬೇಕು. ಕೌಟುಂಬಿಕ ಆಸ್ತಿಯಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಮಹಿಳೆಯರಿಗೆ ನೀಡಬೇಕು. ಕೌಟುಂಬಿಕ ಕೆಲಸದಲ್ಲಿ ಪುರುಷರಿಗೆ ಪ್ರತ್ಯೇಕ ಕಾರ್ಯಗಳಿಲ್ಲ. ಪುರುಷರು ಕೂಡ ಕುಟುಂಬದ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದರು.

ಪೆರಿಯಾರ್ ಬಿತ್ತಿದ ಬೀಜಗಳು:
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ, ಮಹಿಳೆಯರಿಗೆ ಆಸ್ತಿ ಹಕ್ಕುಗಳು, ಕುಟುಂಬ ಕಲ್ಯಾಣ ಯೋಜನೆ, ಅಂತರ್ಜಾತಿ ವಿವಾಹ, ಸುಧಾರಿತ ವಿವಾಹ ಕಾಯಿದೆ ಮುಂತಾದವುಗಳು.

ಮಿತವ್ಯಯ:
ಪೆರಿಯಾರ್ ಅವರು ಮಿತವ್ಯಯ ಮಾಡುವ ಸದ್ಗುಣವನ್ನು ಹೆಚ್ಚು ಒತ್ತಿಹೇಳುತ್ತಿದ್ದರು; ಅದಕ್ಕೆ ತಕ್ಕಂತೆ ಬದುಕಿದರು. ಆರ್ಥಿಕ ಸ್ವಾವಲಂಬನೆ ಇಲ್ಲದಿರುವಾಗ ಎಲ್ಲರೂ ಮಿತವ್ಯಯ ರೂಢಿಸಿಕೊಳ್ಳಬೇಕು ಎಂದರು. ಹಬ್ಬ, ಆಚರಣೆಗಳಿಂದ ಮೂಢನಂಬಿಕೆಗಳು, ದುಂದುವೆಚ್ಚಗಳು ಉಂಟಾಗುವುದರಿಂದ ಅನಾವಶ್ಯಕವಾದ ಆಚಾರ-ವಿಚಾರಗಳನ್ನು ತಪ್ಪಿಸಬೇಕು ಎಂದರು. ಮದುವೆಯಂತಹ ಸಮಾರಂಭಗಳನ್ನು ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ಹಾಗೂ ಸುಧಾರಿತ ರೀತಿಯಲ್ಲಿ ನಡೆಸಬೇಕು ಎಂದರು.

ಆಲೋಚನಾ ಕೌಶಲ್ಯಗಳು:
ಪೆರಿಯಾರ್ ಅವರ ಚಿಂತನೆಗಳು ದಾರ್ಶನಿಕವಾದದ್ದು; ವೈಜ್ಞಾನಿಕ ಆಧಾರಿತವಾದದ್ದು; ಮಾನವೀಯತೆ ಬೆಳೆಯಲು ಜನ್ಮತಾಳಿದ್ದು; ಅವರು ಎಂದಿಗೂ ಪ್ರಾಯೋಗಿಕವಲ್ಲದ ಅಭಿಪ್ರಾಯಗಳನ್ನು ಹೇಳಲಿಲ್ಲ. ಅಲ್ಲದೆ, ಅವರು ತಮ್ಮ ಸುಧಾರಣಾ ಕಲ್ಪನೆಗಳಿಗೆ ತಕ್ಕಂತೆ ಬದುಕಿದರು; ಅವರ ಜೀವನದುದ್ದಕ್ಕೂ ವಿಚಾರವಾದವನ್ನು ಪ್ರತಿಪಾದಿಸಿದರು; ಸಮಾಜವು ಮೂಢನಂಬಿಕೆಗಳಿಂದ ಚೇತರಿಸಿಕೊಳ್ಳಲು ಶ್ರಮಿಸಿದರು; ಅದಕ್ಕಾಗಿ ಹಲವು ಬಾರಿ ಜೈಲಿಗೆ ಹೋದರು; ಅವರು ಅನೇಕ ಜನರ ತೀವ್ರ ವಿರೋಧವನ್ನು ಎದುರಿಸಿದ್ದಾರೆ.

ಆದರೆ, ಕೊನೆಯ ಉಸಿರು ಇರುವವರೆಗೂ ಸಮಾಜ ಸುಧಾರಕರಾಗಿಯೇ ಬದುಕಿ, ತೀರಿಕೊಂಡರು. ಪೆರಿಯಾರ್ ಅವರ ಚಿಂತನೆಗಳು ಜ್ಞಾನದ ಜಗತ್ತಿಗೆ ಕೀಲಿ ಇದ್ದಂತೆ; ವೈಚಾರಿಕತೆಯ ಮಾರ್ಗಕ್ಕೆ ಮಾರ್ಗದರ್ಶಕರಂತೆ. ಮಾನವ ನೇಮದ ಕರೆ ಗಂಟೆ. ಪ್ರಬಲ ಜಾತಿಗಳಿಗೆ ಎಚ್ಚರಿಕೆ ಧ್ವನಿ. ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಇವರೇ ಸರಿಯಾದ ಮದ್ದು ಎಂದು ವಿದ್ವಾಂಸರು ಹೇಳುತ್ತಾರೆ.

Related Posts