ಕಾಂಗ್ರೆಸ್ ಮಾದರಿಯಲ್ಲಿ ಉಚಿತ ಭರವಸೆಗಳನ್ನು ನೀಡಿ ಐದು ರಾಜ್ಯಗಳ ಚುನಾವಣೆ ಎದುರಿಸಲು ಬಿಜೆಪಿ ಪ್ಲಾನ್! » Dynamic Leader
December 13, 2024
ದೇಶ ರಾಜಕೀಯ

ಕಾಂಗ್ರೆಸ್ ಮಾದರಿಯಲ್ಲಿ ಉಚಿತ ಭರವಸೆಗಳನ್ನು ನೀಡಿ ಐದು ರಾಜ್ಯಗಳ ಚುನಾವಣೆ ಎದುರಿಸಲು ಬಿಜೆಪಿ ಪ್ಲಾನ್!

ಡಿ.ಸಿ.ಪ್ರಕಾಶ್

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಉಚಿತ ಯೋಜನೆಗಳನ್ನು ಘೋಷಿಸುವುದು ಎಂಬುದನ್ನು ಸೂಚಿಸುವಂತೆ ಪಕ್ಷದ ನಾಯಕತ್ವ ಎಲ್ಲಾ ರಾಜ್ಯ ಬಿಜೆಪಿ ನಾಯಕರನ್ನು ಕೇಳಿಕೊಂಡಿವೆ.

ಚುನಾವಣಾ ಆಯೋಗವು ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ ಮತ್ತು ತೆಲಂಗಾಣಗಳಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮಿನಿ ಸಾರ್ವತ್ರಿಕ ಚುನಾವಣೆ ಎಂದೇ ಬಿಂಬಿಸಲಾಗಿದೆ.

ಹೀಗಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತು ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಇದರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ, ಮಿಜೋರಾಂನಲ್ಲಿ ಬಿಜೆಪಿ ಮೈತ್ರಿ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ ಅಧಿಕಾರದಲ್ಲಿದೆ.

ಕರ್ನಾಟಕದಲ್ಲಿ ಅಧಿಕಾರ ಹಿಡಿದುಕೊಂಡು ಉತ್ಸಾಹದಲ್ಲಿರುವ ಕಾಂಗ್ರೆಸ್, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತು ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಅಧಿಕಾರಕಾರಕ್ಕೆ ಬರಲು ತೀವ್ರ ಪೈಪೋಟಿ ನಡೆಸುತ್ತಿವೆ. ಕರ್ನಾಟಕದಲ್ಲಿ ಚುನಾವಣಾ ಕೆಲಸದಲ್ಲಿ ತೊಡಗಿದ್ದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳ್ ಅವರಿಗೆ ಇದರ ಹೊಣೆಯನ್ನು ರಾಹುಲ್ ವಹಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ 16 ರಂದು ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮೋದಿ, ಗೆಲುವಿಗೆ ಶ್ರಮಿಸುವಂತೆ ಸಲಹೆ ನೀಡಿದ್ದರು.

ಇದನ್ನೂ ಓದಿ: ಅಡುಗೆ ಸಿಲಿಂಡರ್ ಬೆಲೆ: ಸಂಕಷ್ಟದಲ್ಲಿರುವ ನಾಡಿನ ಜನರ ಕೋಪವನ್ನು 200 ರೂಪಾಯಿ ಸಬ್ಸಿಡಿಯಿಂದ ಕಡಿಮೆ ಮಾಡಲು ಸಾಧ್ಯವಿಲ್ಲ; ಇದು ಚುನಾವಣೆ ಲಾಲಿಪಾಪ್!

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಹಲವು ಕಾರಣಗಳಿದ್ದರೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕುಟುಂಬದ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ನಿರುದ್ಯೋಗಿ ಪದವೀಧರರಿಗೆ 3,000 ರೂ., ಡಿಪ್ಲೊಮಾದಾರರಿಗೆ ತಿಂಗಳಿಗೆ 1,500 ರೂ., 200 ಯೂನಿಟ್ ಉಚಿತ ವಿದ್ಯುತ್ ಮುಖ್ಯ ಕಾರಣಗಳಾಗಿದ್ದವು.

ಇದನ್ನು ಬಿಜೆಪಿ ನಾಯಕತ್ವದ ಗಮನಕ್ಕೆ ತಂದಿರುವ ರಾಜ್ಯ ನಾಯಕರುಗಳು, ಉಚಿತ ಯೋಜನೆಗಳನ್ನು ಘೋಷಿಸದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ಕೇಂದ್ರ ಸಮಿತಿ ಸಭೆಯಲ್ಲೂ ಚರ್ಚೆ ನಡೆದಿದೆ. ಅದರ ಬೆನ್ನಲ್ಲೇ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂ.ಗಳನ್ನು ಕಡಿಮೆ ಮಾಡಲಾಯಿತು.

ಅದನ್ನು ಅನುಸರಿಸಿ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಯಾವ ಉಚಿತ ಕಾರ್ಯಕ್ರಮಗಳನ್ನು ಘೋಷಿಸಲಿದೆ ಎಂಬುದನ್ನು ತಿಳಿದುಕೊಂಡು, ಅದನ್ನು ಈಗಲೇ ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಬಿಜೆಪಿ ನಾಯಕತ್ವ ಕೇಳಿಕೊಂಡಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಉಚಿತ ಕಾರ್ಯಕ್ರಮಗಳನ್ನು ಘೋಷಿಸುವುದು ಎಂಬುದರ ಕುರಿತು ಬಿಜೆಪಿ ರಾಜ್ಯ ಮುಖಂಡರು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಸಲಹೆ ನೀಡುವಂತೆ ಸೂಚಿಸಿದ್ದಾರೆ.

ಈ ಹಿನ್ನಲೆಯಲ್ಲಿ, 300 ಯೂನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ದಿನಕ್ಕೆ ಎರಡು ಜಿಬಿ ಮೊಬೈಲ್‌ ಡೇಟಾ, ಉಚಿತ ಸ್ಮಾರ್ಟ್‌ಫೋನ್‌, ಗೃಹಿಣಿಯರಿಗೆ ತಿಂಗಳಿಗೆ 3 ಸಾವಿರ ರೂ. ಸೇರಿದಂತೆ ಹಲವು ಭರವಸೆಗಳನ್ನು ನೀಡಲು ಬಿಜೆಪಿ ಮುಂದಾಗಿದೆ. ಎಂದು ತಿಳಿದು ಬಂದಿದೆ.

Related Posts