ರೂ.10 ಕೋಟಿಯನ್ನು ತಮ್ಮದಾಗಿಸಿಕೊಂಡ 11 ಸ್ವಚ್ಛತಾ ಮಹಿಳಾ ಕಾರ್ಮಿಕರು!
ಕೇರಳದಲ್ಲಿ ಲಾಟರಿ ಟಿಕೆಟ್‌ಗಳನ್ನು ಸರ್ಕಾರ ಮಾರಾಟ ಮಾಡುತ್ತಿದೆ. ಹಬ್ಬದ ದಿನಗಳಲ್ಲಿ ಬಂಪರ್ ಬಹುಮಾನವಾಗಿ ದೊಡ್ಡ ಮೊತ್ತದ ವಿಶೇಷ ಮಾರಾಟವೂ ನಡೆಯುತ್ತಿದೆ. ಕೇರಳ ಲಾಟರಿ ಟಿಕೆಟ್‌ಗಳನ್ನು ಕೇರಳ ರಾಜ್ಯದ ಜನರು ಮಾತ್ರವಲ್ಲದೆ ಹೊರ ರಾಜ್ಯದವರೂ ಖರೀದಿಸುತ್ತಾರೆ.
ಈ ಹಿನ್ನಲೆಯಲ್ಲಿ ಕೇರಳದಲ್ಲಿ 2023ನೇ ಸಾಲಿನ ಮಾನ್ಸೂನ್ ಬಂಪರ್ ಬಹುಮಾನವಾಗಿ ರೂ.10 ಕೋಟಿ ಪ್ರಕಟಿಸಲಾಗಿತ್ತು. ಇದಕ್ಕಾಗಿ 27 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿದ್ದು, ಪ್ರತಿ ಟಿಕೆಟಿನ ಬೆಲೆ 250 ರೂಪಾಯಿ ಎಂದು ಘೋಷಿಸಲಾಗಿತ್ತು.
ಕಳೆದ 26 ರಂದು ಈ ಬಂಪರ್ ಲಾಟರಿ ಟಿಕೆಟ್ ಡ್ರಾ ನಡೆದಿತ್ತು. ಇದರಲ್ಲಿ ಎಂ.ಪಿ. 200261 ಸಂಖ್ಯೆಯ ಲಾಟರಿ ಟಿಕೆಟ್‌ಗೆ 10 ಕೋಟಿ ರೂಪಾಯಿ ಬಿದ್ದಿತು. ಪಾಲಕ್ಕಾಡ್‌ನಲ್ಲಿ ಮಾರಾಟವಾದ ಈ ಲಾಟರಿ ಟಿಕೆಟ್ ಖರೀದಿಸಿದವರು ಯಾರು ಎಂಬ ಕುತೂಹಲ ಮೂಡಿಸಿದ ಹಿನ್ನಲೆಯಲ್ಲಿ ಲಾಟರಿ ಟಿಕೆಟನ್ನು 11 ಸ್ವಚ್ಛತಾ ಮಹಿಳಾ ಕಾರ್ಮಿಕರು ಖರೀದಿಸಿದ್ದಾರೆ ಎಂಬು ಸುದ್ದಿ ತಿಳಿದುಬಂದಿತು.
250 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಅನ್ನು 11 ಸ್ವಚ್ಛತಾ ಮಹಿಳಾ ಕಾರ್ಮಿಕರು ಹಂಚಿಕೊಂಡು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಮಲಪ್ಪುರಂ ಜಿಲ್ಲೆಯ ಪರಪ್ಪನಕಾಡಿ ಪುರಸಭೆಯಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ 9 ಮಂದಿ 25 ರೂಪಾಯಿ ಹಾಗೂ ಒಬ್ಬರು 50 ರೂಪಾಯಿ ಹಂಚಿಕೊಂಡು ಲಾಟರಿ ಟಿಕೆಟ್ ಖರೀದಿಸಿದ್ದಾರೆ.
ಆ ಲಾಟರಿ ಟಿಕೆಟಿಗೆ ಬಹುಮಾನ ಬಿದ್ದು ಕ್ಷಣಮಾತ್ರದಲ್ಲಿ ಅವರ ಬದುಕನ್ನೇ ಬದಲಿಸಿದೆ. ಲಾಟರಿಯಲ್ಲಿ 10 ಕೋಟಿ ರೂಪಾಯಿ ಬಿದ್ದಿರುವ ಸುದ್ದಿಯಿಂದ ಸ್ವಚ್ಛತಾ ಮಹಿಳಾ ಕಾರ್ಮಿಕರು ಖುಷಿಯಲ್ಲಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು, ಅದನ್ನೇ ಅದೃಷ್ಟ ಎನ್ನುತ್ತಾರೆ. ಅವರ ಜೀವನದಲ್ಲಿ ತಾವೇ ಊಹಿಸದಂತಹ ಬದಲಾವಣೆ ಉಂಟಾಗಿದೆ ಎಂದು ಅಭಿನಂದಿಸುತ್ತಿದ್ದಾರೆ.