ಪ್ರಧಾನಿಗೆ ಈಶಾನ್ಯಕ್ಕಿಂತ ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಹೆಚ್ಚು ಒಲವು!
ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಎರಡನೇ ಸಭೆಯಲ್ಲಿ ಒಕ್ಕೂಟಕ್ಕೆ ಇಂಡಿಯಾ (I.N.D.I.A) ಎಂದು ಹೆಸರಿಡಲಾಗಿತ್ತು. ಇದು ವೈರಲ್ ಆಗಿದ್ದು, ಈಗ ದೇಶಾದ್ಯಂತ ಇಂಡಿಯಾ VS ಎನ್ ಡಿಎ ಎಂದು ರಾಜಕೀಯ ಮಾಡಲಾಗುತ್ತಿದೆ.
ಈ ಹಿನ್ನಲೆಯಲ್ಲಿ, ವಿರೋಧ ಪಕ್ಷಗಳ ಮೈತ್ರಿಯನ್ನು ‘ಇಂಡಿಯನ್ ಮುಜಾಹಿದ್ದೀನ್, ಈಸ್ಟ್ ಇಂಡಿಯಾ ಕಂಪನಿ, ಪಿಎಫ್‌ಐ ಕೂಡ ಇಂಡಿಯಾವನ್ನು ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, “ನಮ್ಮ ಪಾಸ್‌ಪೋರ್ಟ್ ಕೂಡ ರಿಪಬ್ಲಿಕ್ ಆಫ್ ಇಂಡಿಯಾ ಎಂದು ಬರೆಯುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
“ಮೋದಿಜಿಯವರ ಮುದ್ದಿನ ಯೋಜನೆಗಳಾದ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಖೇಲೋ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಅವರ ಪ್ರಮುಖ ಚಿಂತಕರ ಚಾವಡಿ (ನೀತಿ ಆಯೋಗ) ಕೂಡ ಟೀಮ್ ಇಂಡಿಯಾ ಎಂದು ಕರೆಯಲ್ಪಡುತ್ತದೆ.
ಸರ್ವೋಚ್ಚ ನಾಯಕ (ನರೇಂದ್ರ ಮೋದಿ) ಇಂಡಿಯಾ ಮೈತ್ರಿಯಿಂದ ವಿಚಲಿತರಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ನಮಗಿರುವ ಸಮಸ್ಯೆ ಏನೆಂದರೆ, ಪ್ರಧಾನಿ ಈಶಾನ್ಯಕ್ಕಿಂತ (ಮಣಿಪುರ) ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ. ಮಣಿಪುರ ಟೂಲ್‌ಕಿಟ್‌ನ ದಿಕ್ಕು ತಪ್ಪಿಸುವ ಸಮಸ್ಯೆಗಳ ಕಿಟ್ ಅನ್ನು ಸಕ್ರಿಯಗೊಳಿಸಲಾಗಿದೆ” ಎಂದು ಹೇಳಿದ್ದಾರೆ.