ಮಣಿಪುರದಲ್ಲಿ ಹಿಂದೂ 'ಸನಾಮಹಿ' ರಾಜ್ಯವನ್ನು ಮರು ಸ್ಥಾಪಿಸಲು ಆರ್.ಎಸ್.ಎಸ್-ಸಂಘಪರಿವಾರ ಸಂಚು! » Dynamic Leader
October 4, 2024
ದೇಶ

ಮಣಿಪುರದಲ್ಲಿ ಹಿಂದೂ ‘ಸನಾಮಹಿ’ ರಾಜ್ಯವನ್ನು ಮರು ಸ್ಥಾಪಿಸಲು ಆರ್.ಎಸ್.ಎಸ್-ಸಂಘಪರಿವಾರ ಸಂಚು!

ಡಿ.ಸಿ.ಪ್ರಕಾಶ್

ಮಣಿಪುರವನ್ನು 1949ರಲ್ಲಿ ಭಾರತಕ್ಕೆ ಸೇರಿಸಲಾಯಿತು. ಇದನ್ನು 1956ರಲ್ಲಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ, 1972ರಲ್ಲಿ ರಾಜ್ಯ ಸ್ಥಾನಮಾನ ನೀಡಲಾಯಿತು. ಮಣಿಪುರವು ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶ. ಅಲ್ಲಿ ಬಯಲು ಪ್ರದೇಶವೆಂದರೆ ಅದು ಶೇ.10ರಷ್ಟಿರುವ ಕಣಿವೆ ಭೂಮಿ ಮಾತ್ರ. ಈ ಕಣಿವೆ ಪ್ರದೇಶದಲ್ಲಿ ಬಹುಪಾಲು ಅಂದರೆ ರಾಜ್ಯದ ಜನಸಂಖ್ಯೆಯ ಶೇ.53% ರಷ್ಟು ಮಣಿಪುರಿ ಮಾತನಾಡುವ ‘ಮೈತಿ’ ಜನರು ಇಲ್ಲಿ ವಾಸಿಸುತ್ತಾರೆ. ಶೇ.90 ರಷ್ಟಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಕುಕಿ, ನಾಗಾ ಮತ್ತು ಸೋಮಿ ಸೇರಿದಂತೆ ಬುಡಕಟ್ಟು ಗುಂಪುಗಳು ವಾಸಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಣಿವೆಯ ಬಹುಪಾಲು ಜನರು ಹಿಂದೂಗಳು. ಗುಡ್ಡಗಾಡು ಜನಾಂಗದವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು.

ಈ ಎರಡು ಸಾಮಾಜಿಕ-ಜನಾಂಗೀಯ ಗುಂಪುಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವರ ಆವಾಸಸ್ಥಾನ. ಸಂವಿಧಾನದ 371-ಸಿ ಪ್ರಕಾರ, ಬುಡಕಟ್ಟು ಜನರಲ್ಲದವರು ಗುಡ್ಡಗಾಡು ಪ್ರದೇಶಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. (ಆದರೆ ಬುಡಕಟ್ಟು ಜನರು ಬಯಲು ಮತ್ತು ಕಣಿವೆಗಳಲ್ಲಿ ಭೂಮಿಯನ್ನು ಪಡೆದುಕೊಳ್ಳಬಹುದು) ಈ ಕಾರಣದಿಂದ ಕಳೆದ 2013ರಲ್ಲಿ “ನಾವು ವಾಸಿಸುವ ಬಯಲು ಭೂಮಿ ನಮಗೆ ಸಾಕಾಗುತ್ತಿಲ್ಲ. ಬರ್ಮಾ ಮತ್ತು ಬಾಂಗ್ಲಾದೇಶದ ನಿರಾಶ್ರಿತರಿಂದ ನಮ್ಮ ಆವಾಸಸ್ಥಾನಕ್ಕೆ ಬೆದರಿಕೆ ಇದೆ. ಹೀಗಾಗಿ ನಮ್ಮನ್ನೂ ಬುಡಗಟ್ಟು ಜನರೆಂದು ಘೋಷಿಸಿ” ಎಂದು ಮೈತಿ ಹಿಂದೂಗಳಿಂದ ಆಗ್ರಹಿಸಲಾಯಿತು. ಇದು ಸಮಸ್ಯೆಯ ಮೊದಲ ಅಂಶವಾಗಿದೆ.

ಹತ್ತು ವರ್ಷಗಳ ನಂತರ, ಏಪ್ರಿಲ್ 19, 2023 ರಂದು ಮಣಿಪುರ ನ್ಯಾಯಾಲಯವು ಈ ಸಂಬಂಧ ಆದೇಶವೊಂದನ್ನು ನೀಡಿತ್ತು. ಅದರಲ್ಲಿ, ಮೈತಿ ಹಿಂದೂಗಳನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ (ಬಿಜೆಪಿ) 4 ವಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ (ಬಿಜೆಪಿ) ಶಿಫಾರಸುಗಳನ್ನು ನೀಡಬೇಕು ಎಂದು ಉಲ್ಲೇಖಿಸಿತ್ತು.

ಈಶಾನ್ಯ ರಾಜ್ಯಗಳಲ್ಲಿ ಆರ್.ಎಸ್.ಎಸ್. ಸಂಘಟಣೆ

ಈಗಾಗಲೇ BC, SC, EWC ಯಂತಹ ಮೀಸಲಾತಿಗಳನ್ನು ಬಯಲು ಸೀಮೆಯಲ್ಲಿ ವಾಸಿಸುವ ಮೈತಿಗಳು ಅನುಭವಿಸುತ್ತಿದ್ದಾರೆ. ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳು ಕಣಿವೆಗಳಲ್ಲಿ ವಾಸಿಸುವ ಮೈತಿ ಹಿಂದೂಗಳ ಪಾಲಾಗಿವೆ. ಸರ್ಕಾರಿ ಇಲಾಖೆಗಳಲ್ಲಿ, ಶಿಕ್ಷಣ ಮತ್ತು ಆರ್ಥಿಕತೆಯಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತಿದೆ. ಈಗ ಅವರನ್ನೂ ಬುಡಕಟ್ಟು ಎಂದು ಘೋಷಿಸಿದರೆ, ಮಣಿಪುರದ ಬುಡಕಟ್ಟು ಗುಂಪುಗಳು ತಮ್ಮ ಭೂಮಿ ಮತ್ತು ಭವಿಷ್ಯವನ್ನು ಕಳೆದುಕೊಳ್ಳುತ್ತವೆ ಎಂದು ಪ್ರತಿಭಟಿಸಲು ಪ್ರಾರಂಭಿಸಿದವು.

ಇದಕ್ಕಾಗಿ ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ATSUM) ಏಪ್ರಿಲ್ 23 ರಂದು ಗುಡ್ಡಗಾಡು ಪ್ರದೇಶಗಳಲ್ಲಿ 12 ಗಂಟೆಗಳ ಮುಷ್ಕರವನ್ನು ನಡೆಸಿತು. ನಂತರ, ಮೇ 3 ರಂದು, ಮಣಿಪುರದ ರಾಜಧಾನಿ ಇಂಫಾಲ್ (ಬಯಲು ಪ್ರದೇಶ) ಸೇರಿದಂತೆ 10 ಸ್ಥಳಗಳಲ್ಲಿ ರ‍್ಯಾಲಿಯನ್ನು ಆಯೋಜಿಸಿತು. ಈ ವೇಳೆ 60 ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟನೆ ದಾಖಲಿಸಿದರು. ಆ ರ‍್ಯಾಲಿಯಲ್ಲಿ ಮೊದಲ ಬಾರಿಗೆ ಯೋಜಿತ ದಾಳಿ ನಡೆಸಲಾಯಿತ್ತು.

‘ಮೈತಿ ಮಹಿಳೆಯನ್ನು ಕುಕಿ ಬುಡಕಟ್ಟು ಜನಾಂಗದವರು ಲೈಂಗಿಕ ದೌರ್ಜನ್ಯ ಎಸಗಿ ಕೊಂದಿದ್ದಾರೆ’ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದು, ದಾಳಿಗೆ ಪ್ರಮುಖ ಕಾರಣವಾಯಿತು, ಆ ದ್ವೇಷ ಪ್ರಚಾರದ ಬಿಸಿ, ಸರಣಿ ಹಿಂಸೆಯ ಜ್ವಾಲೆಯನ್ನು ಹೊತ್ತಿಸಿತು. ಆ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಹುಪಾಲರು ಬುಡಕಟ್ಟು ಕುಕಿ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರು ಹೆಚ್ಚಾಗಿ ವಾಸಿಸುವ ಸುರಸಂದಪುರ ಜಿಲ್ಲೆ, ರಾಜಧಾನಿ ಇಂಫಾಲದಲ್ಲೂ ಕುಕಿ ಬುಡಕಟ್ಟು ಜನಾಂಗವನ್ನು ಗುರಿಯಾಗಿಸಿಕೊಂಡು ಮೈತಿಗಳು ದಾಳಿ ನಡೆಸಿದರು.

ಆರ್.ಎಸ್.ಎಸ್. ಪಥಸಂಚಲನ ಇಂಫಾಲ್, ಮಣಿಪುರ

ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಧ್ವಜಗಳು ಇರುವ ಮನೆಗಳನ್ನು ಹೊರತುಪಡಿಸಿ, ಉಳಿಕೆ ಇರುವ ಕುಕಿ ಮನೆಗಳ ಮೇಲೆ ದಾಳಿಯನ್ನು ತೀವ್ರಗೊಳಿಸಲಾಯಿತು. ಈ ಹಿಂಸಾಚಾರದಲ್ಲಿ ಮನೆಗಳು, ಶಾಲೆಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಒಡೆದು ಹಾಕಲಾಗಿದೆ ಮತ್ತು ಬೆಂಕಿ ಹಚ್ಚಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕುಕಿ ಬುಡಕಟ್ಟು ಜನಾಂಗದವರ ಸ್ಮಾರಕಗಳು ಮತ್ತು ಪೂಜಾ ಸ್ಥಳಗಳನ್ನು ಕೆಡವಲಾಗಿದೆ. ಮೇ 3 ರಂದು ನಡೆದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಲವರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

ಆ ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಯಿತು ಮತ್ತು ಇಂಟರ್ನೆಟ್ ಸೇವೆಗಳನ್ನು ಸಹ ಕಡಿತಗೊಳಿಸಲಾಯಿತು. ಸೇನೆಯನ್ನು ಕರೆಸಿ, ಪ್ರತಿಭಟನಾಕಾರರನ್ನು ಕಂಡರೆ ಗುಂಡಿಕ್ಕುವಂತೆ ಆದೇಶವನ್ನೂ ಹೊರಡಿಸಲಾಯಿತು. ಈ ಹಿನ್ನಲೆಯಲ್ಲಿ ಮಣಿಪುರ ರಾಜ್ಯದ ಕುಸ್ತಿಪಟು ಮೇರಿ ಕೋಮ್ ಅವರು ಟ್ವೀಟ್ ಮೂಲಕ ಪ್ರಧಾನಿಯವರಿಗೆ ‘ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ’ ಎಂದು ಮನವಿ ಮಾಡಿದರು. ಆದರೆ ಅಂದು ಕರ್ನಾಟಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಹೋದಯರು ಬ್ಯುಸಿಯಾಗಿದ್ದರು.

ಮಣಿಪುರದ ಎರಡು ಜನಾಂಗೀಯ ಗುಂಪುಗಳ ನಡುವೆ ಹರಡಿರುವ ಈ ದ್ವೇಷ ರಾಜಕೀಯ, ಹಿಂಸಾಚಾರ ಮತ್ತು ಗಲಭೆಗಳ ಹಿಂದೆ ನ್ಯಾಯಾಲಯದ ಆದೇಶಗಳು ಮಾತ್ರವಲ್ಲದೆ ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಸಂಪನ್ಮೂಲಗಳ ಶೋಷಣೆಯನ್ನೂ ಒಳಗೊಂಡಿದೆ. 2022ರಲ್ಲಿ ಎರಡು ಹಂತಗಳಲ್ಲಿ ನಡೆದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿತ್ತು. ಗೆದ್ದವರಲ್ಲಿ ಬಹುಪಾಲರು ಮೈತಿ ಸಮುದಾಯಕ್ಕೆ ಸೇರಿದ ಹಿಂದೂಗಳು.

ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಮೈತೇಯಿ ರಾಜಕುಮಾರ ಟಿಕೇಂದ್ರಜಿತ್, ರಾಜ ಕುಲಚಂದ್ರ ಭಾವಚಿತ್ರ.

ಸುಮಾರು 300 ವರ್ಷಗಳಷ್ಟು ಹಳೆಯದಾದ ಮೈತಿಗಳ ‘ಸನಾಮಹಿ’ ಸಂಸ್ಕೃತಿಯು ಅಲ್ಲಿನ ಹಿಂದೂ ಧರ್ಮದ ಆಚರಣೆಗಳೊಂದಿಗೆ ಹೆಣೆದುಕೊಂಡಿದೆ. ಹಾಗಾಗಿ, ಬಹುಸಂಖ್ಯಾತ ಮೈತಿ ಸಮುದಾಯದವರ ಮೇಲೆ ಕಾಳಜಿ ವಹಿಸುವುದಾಗಿ ಹೇಳಿಕೊಂಡಿರುವ ಬಿಜೆಪಿ, ಕ್ರಿಶ್ಚಿಯನ್ ಕುಕಿ ಬುಡಕಟ್ಟುಗಳ ವಿರುದ್ಧ ಮೈತಿ ಸಮುದಾಯವನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆದುಕೊಂಡಿದೆ. ಇದಕ್ಕಾಗಿ, ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯೋಜನೆಯನ್ನು ಜಾರಿಗೆ ತರಬೇಕೆಂಬ ಮೈತಿಗಳ ಬೇಡಿಕೆಗೆ ಆದ್ಯತೆ ನೀಡಲಾಗುತ್ತಿದೆ. ಇದು ಕುಕಿ ಬುಡಕಟ್ಟುಗಳನ್ನು ಬಯಲು ಸೀಮೆಯಿಂದ ಓಡಿಸುವ ಕುತಂತ್ರವೂ ಇದರಲ್ಲಿ ಅಡಗಿದೆ.

ಒಂದೆಡೆ ಆಡಳಿತಾರೂಢ ಬಿಜೆಪಿ ಸರ್ಕಾರ ಅರಣ್ಯ ರಕ್ಷಣೆಯ ಹೆಸರಿನಲ್ಲಿ ಕುಕಿ ಬುಡಕಟ್ಟುಗಳನ್ನು ಗುಡ್ಡಗಾಡು ಪ್ರದೇಶಗಳಿಂದ ಹೊರದಬ್ಬಿ ಮನೆ, ಕಟ್ಟಡಗಳನ್ನು ನೆಲಸಮ ಮಾಡುತ್ತಿದೆ. ಮತ್ತೊಂದೆಡೆ ಗುಡ್ಡಗಾಡು ಪ್ರದೇಶದಲ್ಲಿ ಬುಡಕಟ್ಟುಗಳಲ್ಲದವರ ಅತಿಕ್ರಮಣಗಳೂ ಹೆಚ್ಚುವಂತೆ ನೋಡಿಕೊಳ್ಳುತ್ತಿವೆ. ಏತನ್ಮಧ್ಯೆ, ‘ನೆರೆಯ ದೇಶಗಳಿಂದ ಕುಕಿ ಬುಡಕಟ್ಟು ಜನಾಂಗದವರು ಮಣಿಪುರಕ್ಕೆ ನುಸುಳಿದ್ದಾರೆ ಮತ್ತು ಸ್ಥಳೀಯ ಕುಕಿ ಜನರು ಅವರನ್ನು ಬೆಂಬಲಿಸುತ್ತಿದ್ದಾರೆ’ ಎಂದು ವ್ಯವಸ್ಥಿತವಾಗಿ ದ್ವೇಷದ ಅಭಿಯಾನವನ್ನು ಮೈತೇಯಿ ಸಮುದಾಯ ಮತ್ತು ಸಂಘಪರಿವಾರದ ಕೃಪಾ ಫೋಸಿತ ಸಂಘಟನೆಗಳು ಮಾಡುತ್ತಿವೆ.

ಧಾರ್ಮಿಕ ನಿಂದನೆಗಳು ಇವುಗಳಿಂದ ಹೊರತಾಗಿಲ್ಲ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅಸಂಖ್ಯಾತ ಕ್ರೈಸ್ತ ಚರ್ಚುಗಳನ್ನು ರಾಜ್ಯ ಸರ್ಕಾರದ ಒಡೆತನದ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿ ಬಿಜೆಪಿ ಸರ್ಕಾರ ಕೆಡವುತ್ತಿದೆ. ಪ್ರಸ್ತುತ ಹಿಂಸಾಚಾರದಲ್ಲಿ ಕ್ಯಾಥೋಲಿಕ್ ಚರ್ಚ್, ಲುಥೆರನ್ ಚರ್ಚ್ ಮತ್ತು ಬ್ಯಾಪ್ಟಿಸ್ಟ್ ಕನ್ವೆನ್ಷನ್ ಚರ್ಚ್ ಸೇರಿದಂತೆ ನೂರಾರು ಚರ್ಚುಗಳು ಸುಟ್ಟು ಹೋಗಿವೆ ಎಂದು ವರದಿಯಾಗಿವೆ. ಇದೆಲ್ಲವೂ 1983ರಲ್ಲಿ ಅಸ್ಸಾಂನಲ್ಲಿ ನಡೆದ ಹಿಂಸಾತ್ಮಕ ನೆಲ್ಲಿ ಹತ್ಯಾಕಾಂಡದ ನಂತರದ ಘಟನೆಗಳನ್ನು ನೆನಪಿಸುತ್ತದೆ. ಈ ಕೃತ್ಯದ ಹಿಂದೆಯೂ ಆರೆಸ್ಸೆಸ್ ಸಂಘಟನೆಯ ಕೈವಾಡವಿತ್ತು ಎನ್ನುತ್ತಾರೆ ಅಸ್ಸಾಂನ ಬುಡಕಟ್ಟು ಜನರು.

ಸನಾಮಹಿ ಧರ್ಮದ ಪವಿತ್ರ ಚಿನ್ಹೆ

ಕರ್ನಾಟಕದಲ್ಲಿ ನಮಗೆ ತಿಳಿದ ಹಿಂದೂ ಸಂಘಟನೆಗಳಂತೆಯೆ ಮಣಿಪುರದಲ್ಲೂ ಅರಂಬೈ ತೆಂಗೋಲ್, ಮೈತಿ-ಲೀಪನ್ ಸೇರಿದಂತೆ ಬಿಜೆಪಿಯ ಆಶೀರ್ವಾದ ಪಡೆದ ಕೆಲವು ಹಿಂದೂ ಫ್ಯಾಸಿಸ್ಟ್ ಸಂಘಟನೆಗಳು ಈ ಹಿಂಸಾಚಾರದಲ್ಲಿ ತೊಡಗಿಕೊಂಡಿವೆ ಎಂದು ಹೇಳಲಾಗುತ್ತಿದೆ. ಆಧುನಿಕ ಬಂದೂಕುಗಳನ್ನು ಹಿಡಿದುಕೊಂಡು ದ್ವಿಚಕ್ರ ವಾಹನಗಳಲ್ಲಿ ಗುಂಪು ಗುಂಪಾಗಿ ತೆರಳಿ, ಪೊಲೀಸ್ ಠಾಣೆಗಳನ್ನು ಲೂಟಿ ಮಾಡಿ, ಕುಕಿ ಆದಿವಾಸಿಗಳ ಹಳ್ಳಿಗಳಿಗೆ ನುಗ್ಗಿ, ಅವರ ಮನೆ, ಸಾಮಾಗ್ರಿ, ಹೆಂಗಸರು ಮತ್ತು ಪುರುಷರನ್ನು ಧ್ವಂಸಗೊಳಿಸಿ ಹತ್ಯೆಯಲ್ಲಿ ತೊಡಗುತ್ತಾರೆ. ಮಣಿಪುರದ ರಾಜಪ್ರಭುತ್ವದ ಸಂಸ್ಕೃತಿಯಾದ ‘ಸನಾಮಹಿ’ ಸಾಮ್ರಾಜ್ಯವನ್ನು ಮರಳಿ ತರುವುದು ಈ ಹಿಂದೂ ಸಂಘಟನೆಗಳ ಮುಖ್ಯ ಗುರಿಯಾಗಿದೆ. ಮಣಿಪುರದ ಆರ್‌ಎಸ್ಎಸ್ ಪ್ರಧಾನ ಕಛೇರಿಯಲ್ಲಿ ಅವರ ಸನಾಮಹಿ ಧ್ವಜವೇ ಹಾರುತ್ತಿದೆ ಎಂದು ಹೇಳಲಾಗುತ್ತಿದೆ.

ಆರ್ಥಿಕವಾಗಿ, ಕುಕಿ ಬುಡಕಟ್ಟು ಜನಾಂಗದವರ ಭೂಮಿಯೇ, ಬಯಲು ಸೀಮೆಯಲ್ಲಿ ವಾಸಿಸುವ ಮೈತಿಗಳ ಗುರಿಯಾಗಿದೆ. ಬುಡಕಟ್ಟು ಜನಾಂಗದವರೆಂದು ಘೋಷಿಸಿಕೊಂಡರೆ ಗುಡ್ಡಗಾಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಆದರೆ, ಇದು ಮೈತಿಗಳ ಒಟ್ಟಾರೆ ಮನಸ್ಥಿತಿಯಲ್ಲ. ಅದೇ ಸಮಾಜದ ಹಣವಂತ ಆಡಳಿತ ವರ್ಗದ ಬೇಡಿಕೆ. ಬಿಜೆಪಿ ಸರ್ಕಾರದ ರಾಷ್ಟ್ರೀಯ ಖಾದ್ಯ ತೈಲ ಯೋಜನೆಗಾಗಿ National Mission on Edible Oils-Oil Palm (NMEO-OP) ಈಶಾನ್ಯ ರಾಜ್ಯಗಳಲ್ಲಿ 2.5 ಲಕ್ಷ ಹೆಕ್ಟೇರ್ ಭೂಮಿ ಬೇಕು. ಅದರ ಬೃಹತ್ ಜಲ ಸಂಪನ್ಮೂಲ ಬೇಕು. ಪತಂಜಲಿ, ಗೋದ್ರೇಜ್, ರುಚಿ, ಸಂಜೀವ್ ಗೋಯೆಂಕಾ ಅವರಂತಹ ದೊಡ್ಡ ಬಂಡವಾಳಶಾಹಿಗಳು ತಮ್ಮ ತೈಲ ವ್ಯವಹಾರವು ಅಭಿವೃದ್ಧಿ ಹೊಂದಲು ಯಾವುದೇ ತೊಂದರೆಯಿಲ್ಲದೆ ಆದಿವಾಸಿಗಳ ಭೂಮಿಯನ್ನು ಪಡೆಯಬೇಕಾಗಿದೆ. ಅವರು ವಾಸಿಸುವ ಜೌಗು ಭೂಮಿಯಿಂದ ಮತ್ತು ಜಲಮೂಲಗಳಿಂದ ಅವರನ್ನು ಓಡಿಸಬೇಕು.

ಮಣಿಪುರದ ಬುಡಕಟ್ಟು ಮಹಿಳೆಯರನ್ನು ವಿವಸ್ತ್ರಗೊಳಿಸಿ, ನಡುರಸ್ತೆಯಲ್ಲಿ ಎಳೆದೊಯ್ದು ತಂದೆ, ಸಹೋದರನನ್ನು ಕೊಂದ ಕ್ರೌರ್ಯ ವಿಡಿಯೋ ಹೊರಬಿದ್ದ ಬಳಿಕ, ಎರಡೂವರೆ ತಿಂಗಳಿಂದ ಬಾಯಿ ಬಿಡದ ಪ್ರಧಾನಿ, ‘ಇದು 140 ಕೋಟಿ ಭಾರತೀಯರಿಗೆ ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ.

ಹೌದು, ದಲ್ಲಾಳಿ ಬಂಡವಾಳಶಾಹಿಗಳ ಗುಲಾಮರು, ಮತಾಂಧತೆ, ವರ್ಣಭೇದ ನೀತಿಯನ್ನು ಪ್ರಚೋದಿಸುವ, ಫ್ಯಾಸಿಸ್ಟ್ ನೀತಿಗಳ ಮೂಲಕ ಜನರನ್ನು ವಿಭಜಿಸುವ, ಮಹಿಳೆಯರನ್ನು ವಿವಸ್ತ್ರಗೊಳಿಸುವ, ಹೆಣ್ಣುಮಕ್ಕಳನ್ನು ಸುಟ್ಟುಹಾಕುವ, ರೈತರನ್ನು ಸಾಯಿಸುವ, ಆದಿವಾಸಿಗಳನ್ನು ಅವರ ಭೂಮಿಯಿಂದ ಓಡಿಸುವ ದ್ವೇಷದ ಜನಸಮೂಹವನ್ನು ಅಧಿಕಾರದಲ್ಲಿ ಇಟ್ಟುಕೊಂಡಿದ್ದಕ್ಕಾಗಿ ನಾವು ನಾಚಿಕೆ ಪಡಲೇಬೇಕು.

Related Posts