38 ಪಕ್ಷಗಳೊಂದಿಗೆ ಮಾತನಾಡಲು ಸಮಯವಿದೆ; ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ! » Dynamic Leader
October 11, 2024
ದೇಶ

38 ಪಕ್ಷಗಳೊಂದಿಗೆ ಮಾತನಾಡಲು ಸಮಯವಿದೆ; ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ!

ಡಿ.ಸಿ.ಪ್ರಕಾಶ್, ಸಂಪಾದಕರು

“ಮೋದಿಯವರೇ ಮಣಿಪುರ ಹೊತ್ತಿ ಉರಿಯುತ್ತಿದೆ; ಕೂಡಲೇ ಅಲ್ಲಿಗೆ ಹೋಗಿ” ಎಂದು ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಪ್ರಧಾನಿ ಮೋದಿಯವರು ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದರು. ಒಂದು ರಾಜ್ಯ ಹಿಂಸಾಚಾರದಿಂದ ನಲುಗಿದಾಗ ಕೇಂದ್ರ ಗೃಹ ಕಾರ್ಯದರ್ಶಿ ಅಮಿತ್ ಶಾ ತಕ್ಷಣವೇ ಅಲ್ಲಿಗೆ ಹೋಗಬೇಕಿತ್ತು. ಆದರೆ, ಅವರೂ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು.

“ಪ್ರಧಾನಿ.. ಮಣಿಪುರದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಹಿಂಸಾಚಾರ ನಡೆಯುತ್ತಿದೆ. ಅದರ ಬಗ್ಗೆ ಮಾತನಾಡದೆ ಬಾಯಿ ಮುಚ್ಚಿಕೊಂಡಿದ್ದೀರಾ?” ಎಂದು ವಿರೋಧ ಪಕ್ಷ ಸೇರಿದಂತೆ ಎಲ್ಲರೂ ಕಿಡಿಕಾರಿದರು. ದೆಹಲಿಯಲ್ಲಿ ಬ್ಯುಸಿಯಾಗಿದ್ದ ಪ್ರಧಾನಿಗೆ ಮಣಿಪುರದ ಹಿಂಸಾಚಾರದಿಂದ ಸಂತ್ರಸ್ತರಾದ ಜನರ ಕೂಗು ಕೇಳಿಸಲಿಲ್ಲವೇನೊ, ಹಾಗಾಗಿ ಮಣಿಪುರ ವಿಚಾರದಲ್ಲಿ ಪ್ರಧಾನಿ ಮಾತನಾಡಲೇ ಇಲ್ಲ.

ಮೇ 4 ರಂದು ಮಣಿಪುರದಲ್ಲಿ ಎರಡು ಜನಾಂಗೀಯ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಎರಡು ತಿಂಗಳಿಗೂ ಹೆಚ್ಚು ಕಾಲ ಸಮಸ್ಯೆ ಮುಂದುವರಿದಿದೆ. ಈ ಅವಧಿಯಲ್ಲಿ, ಅನೇಕ ಚರ್ಚುಗಳು ಮತ್ತು ದೇವಾಲಯಗಳನ್ನು ಸುಟ್ಟು ಬೂದಿ ಮಾಡಲಾಗಿದೆ. ಸಾವಿರಾರು ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ, ಮತ್ತು ಬೆಂಕಿ ಹಚ್ಚಲಾಗಿದೆ. ಎರಡು ಕಡೆಯ ಘರ್ಷಣೆಯಲ್ಲಿ ಸುಮಾರು 150 ಜನರು ಸಾವನ್ನಪ್ಪಿದ್ದಾರೆ.

ಈ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಜಪಾನ್, ಆಸ್ಟ್ರೇಲಿಯಾ, ಪಪುವಾ ನ್ಯೂಗಿನಿಯಾ, ಅಮೆರಿಕ, ಫ್ರಾನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ ಎಂದು ವಿಶ್ವದಾದ್ಯಂತ ಪ್ರವಾಸ ಮಾಡಿದ್ದಾರೆ. ಹಾಗಾಗಿ, ಮಣಿಪುರದ ಬಗ್ಗೆ ಯೋಚಿಸಲು ಅವರಿಗೆ ಸಮಯವಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ ಇದೀಗ ಮಣಿಪುರ ವಿಚಾರದಲ್ಲಿ ಮೌನ ಮುರಿದಿದ್ದಾರೆ.

ಮಣಿಪುರದಲ್ಲಿ ಕುಕಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಎಳೆದೊಯ್ದ ವಿಡಿಯೋ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೇ ಸಂದರ್ಭದಲ್ಲಿ ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಮೊಟ್ಟಮೊದಲ ಬಾರಿಗೆ ಮಾತನಾಡಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ನಿನ್ನೆ (ಜುಲೈ 20) ಆರಂಭವಾಗಿದೆ. ಸಭೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ,

“ಮಣಿಪುರದಲ್ಲಿ ನಡೆದ ಘಟನೆಯ ಬಗ್ಗೆ ತಿಳಿದು ಆಘಾತವಾಯಿತು. ಯಾವ ಅಪರಾಧಿಯೂ ತಪ್ಪಿಸಿಕೊಳ್ಳುಲು ಬಿಡುವುದಿಲ್ಲ ಎಂದು ನಾನು ಈ ದೇಶಕ್ಕೆ ಭರವಸೆ ನೀಡುತ್ತೇನೆ. ಕಾನೂನು ತನ್ನ ಎಲ್ಲಾ ಶಕ್ತಿಯೊಂದಿಗೆ ನಿರ್ಧರಿಸುತ್ತದೆ. ಮಣಿಪುರದ ಹೆಣ್ಣುಮಕ್ಕಳಿಗೆ ನಡೆದಿರುವುದನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಅಲ್ಲದೆ, ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನನ್ನು ಬಲಪಡಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

“38 ಪಕ್ಷಗಳೊಂದಿಗೆ ಮಾತನಾಡಲು ಸಮಯವಿದೆ. ಆದರೆ ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. “ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿಗೆ ನಾಚಿಕೆಯಾಗಬೇಕು” ಎಂದು ಸಿಪಿಎಂ ನಾಯಕರಲ್ಲಿ ಒಬ್ಬರಾದ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸುಪ್ರೀಂ ಕೋರ್ಟ್ ಹಿಂಸಾಚಾರವನ್ನು ಖಂಡಿಸಿದ ನಂತರವೇ ಮೋದಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ” ಎಂದು ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ. ಮಣಿಪುರ ವಿಷಯ ಸಂಸತ್ತಿನಲ್ಲಿ ದಿನವಿಡೀ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರ ಮೇಲಿನ ಕ್ರೌರ್ಯ, ಕಳೆದ ಮೇ ತಿಂಗಳಲ್ಲಿ ನಡೆದಿದ್ದು ಎನ್ನಲಾಗಿದೆ. ಆ ರಾಜ್ಯದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದ್ದರಿಂದ ತಕ್ಷಣ ಪತ್ತೆಯಾಗಿರಲಿಲ್ಲ. ಆ ದೌರ್ಜನ್ಯ ಬೆಳಕಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದೆ ಅಲ್ಲಿನ ಅಧಿಕಾರ ವರ್ಗ. ಬಹುಶಃ ಅದು ಹೊರಬರದಿದ್ದರೆ, ಯಾವುದೇ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಇಷ್ಟು ದೊಡ್ಡ ಘಟನೆ ನಡೆದಿದ್ದು, ಸರ್ಕಾರಕ್ಕೆ ಅದರ ಬಗ್ಗೆ ತಿಳಿಯದೇ ಇರಲು ಸಾಧ್ಯವೇ ಇಲ್ಲ. ಆಗ ಏಕೆ ಕ್ರಮ ಕೈಗೊಂಡಿಲ್ಲ?

ಮಣಿಪುರದಲ್ಲಿ ಅನೇಕ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಅವರನ್ನು ಹತ್ತಿಕ್ಕಲು ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯದ ತಂತ್ರವನ್ನು ಅನುಸರಿಸಿದ್ದಾರೆ. ಗಲಭೆಗಳ ಸಮಯದಲ್ಲಿ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು ಒಂದು ಮಾದರಿ (Pattern) ಆಗಿದೆ. ಇದು ಗುಜರಾತ್ ಮತ್ತು ಮುಜಫರಾಬಾದ್‌ನಂತಹ ಎಲ್ಲೆಡೆ ನಡೆದಿದೆ.

ಮೇಲುಗೈ ಸಾಧಿಸಬಲ್ಲ ಗುಂಪು… ಅದು ಜಾತಿವಾದಿ ಗುಂಪು ಇರಬಹುದು, ಧಾರ್ಮಿಕ ಗುಂಪು ಇರಬಹುದು ಅಥವಾ ಜನಾಂಗೀಯ ಗುಂಪು ಇರಬಹುದು. ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವೆ ಸಮಸ್ಯೆಗಳು ಎದುರಾದಾಗ, ಬಹುಸಂಖ್ಯಾತರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ವಿಧಾನವನ್ನು ಅನುಸರಿಸುತ್ತಾರೆ. ಮಣಿಪುರದ ಇಬ್ಬರು ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅದನ್ನು ವಿಡಿಯೋದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಶಕ್ತಿಯನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಅವರು ಅದನ್ನು ಅಧಿಕಾರವನ್ನು ಉಳಿಸಿಕೊಳ್ಳುವ ವಿಷಯವಾಗಿ ನೋಡುತ್ತಾರೆ.

ಮಣಿಪುರ ಘಟನೆಯನ್ನು ಪ್ರತ್ಯೇಕ ವಿಷಯವಾಗಿ ನೋಡಬಾರದು. ಮಹಿಳೆಯರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಇಲ್ಲ. ಮಣಿಪುರದಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಇಂದಿನವರೆಗೂ ಚರ್ಚೆಯ ವಿಷಯವಾಗಿರಲಿಲ್ಲ. ಮಣಿಪುರದ ಆಚೆಗಿನ ಮಾಧ್ಯಮಗಳೂ ಅದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ. ಆದರೆ ಈ ವಿಡಿಯೋ ಬಹಿರಂಗವಾದ ನಂತರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ದರಿಂದ, ನಾವು ನಮ್ಮ ಮೌನವನ್ನು ಪ್ರಶ್ನಿಸುವ ಸಮಯ ಎಂದು ಇದನ್ನು ನೋಡಬೇಕು.

ಮಣಿಪುರ ಹೊತ್ತಿ ಉರಿಯುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಅವುಕ್ಕೆಲ್ಲ ಅವರಿಗೆ ಸಮಯವಿದೆ. ವೀಡಿಯೊ ಬಿಡುಗಡೆಯಾಗಿ ದೇಶವೇ ಅಲ್ಲೋಲಕಲ್ಲೋಲವಾದ ಬಳಿಕವೇ ಮಣಿಪುರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ಹೃದಯ ಭಾರವಾಗಿದೆ” ಎಂದು ಪ್ರಧಾನಿ ಹೇಳುತ್ತಾರೆ. ಅಧಿಕಾರವಿಲ್ಲದ ಸಾಮಾನ್ಯ ಜನರು ಹಾಗೆ ಹೇಳಬಹುದು. ಆದರೆ ದೇಶದ ಪ್ರಜೆಗಳ ರಕ್ಷಣೆಯ ಹೊಣೆ ಹೊತ್ತಿರುವ ಮತ್ತು ಎಲ್ಲ ಅಧಿಕಾರ ಹೊಂದಿರುವ ಪ್ರಧಾನಿ ಸಾಮಾನ್ಯರಂತೆ ಮಾತನಾಡುತ್ತಿದ್ದಾರೆ.

ಮಣಿಪುರದಲ್ಲಿ ಶಾಂತಿ ಮರಳಿದೆ ಎಂದು ಅವರು ಹೇಳುತ್ತಾರೆ. ಆದರೆ, ಮನೆಗಳಿಂದ ಹೊರಹಾಕಲ್ಪಟ್ಟ ಸುಮಾರು 50,000 ಜನರು ಇನ್ನೂ ತಮ್ಮ ಮನೆಗಳಿಗೆ ಮರಳಿಲ್ಲ. ಎರಡು ತಿಂಗಳಿಂದ ಸಮಸ್ಯೆ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಅವರು ನಿಜವಾಗಿಯೂ ಸೂಕ್ತ ಕ್ರಮ ಕೈಗೊಂಡಿದ್ದರೆ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿತ್ತು.

ಡಬಲ್ ಇಂಜಿನ್ ಸರ್ಕಾರ (ಕೇಂದ್ರ ಮತ್ತು ರಾಜ್ಯದಲ್ಲಿ ಒಂದು ಪಕ್ಷದ ಆಡಳಿತ) ಇದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದು ಮೋದಿ ಪ್ರಚಾರ ವೇದಿಕೆಗಳಲ್ಲಿ ಮಾತನಾಡುತ್ತಿದ್ದರು. ‘ಡಬಲ್ ಇಂಜಿನ್ ಸರ್ಕಾರ್’ ಇದ್ದರೂ ಮಣಿಪುರದಲ್ಲಿ ಏಕೆ ಇಷ್ಟೊಂದು ದೌರ್ಜನ್ಯಗಳು ನಡೆಯುತ್ತಿವೆ? ಇದಕ್ಕೆ ಪ್ರಧಾನಿ ಉತ್ತರಿಸುವರೇ?!

Related Posts