ಕೆಲವೊಮ್ಮೆ ಅಧಿಕಾರ ಮತ್ತು ಅಜ್ಞಾನ ಒಟ್ಟೊಟ್ಟಿಗೆ ಸಾಗುತ್ತವೆ; ಅದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೇ ಜೀವಂತ ಸಾಕ್ಷಿ! » Dynamic Leader
September 18, 2024
ರಾಜಕೀಯ

ಕೆಲವೊಮ್ಮೆ ಅಧಿಕಾರ ಮತ್ತು ಅಜ್ಞಾನ ಒಟ್ಟೊಟ್ಟಿಗೆ ಸಾಗುತ್ತವೆ; ಅದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೇ ಜೀವಂತ ಸಾಕ್ಷಿ!

ಕೆಲವೊಮ್ಮೆ ಅಧಿಕಾರ ಮತ್ತು ಅಜ್ಞಾನ ಒಟ್ಟೊಟ್ಟಿಗೆ ಸಾಗುತ್ತವೆ; ಅದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೇ ಜೀವಂತ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. “2018ರಲ್ಲಿ ತಮ್ಮ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಹೊರರಾಜ್ಯಗಳ ಗಣ್ಯರಿಗೆ ಆತಿಥ್ಯ ನೀಡಲು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿರಲಿಲ್ಲವೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಸ್ವತಃ ಮುಖ್ಯಮಂತ್ರಿಗಳು, ಸಂಸದೀಯ ಸಚಿವರು, ಇನ್ನೂ ಕೆಲ ಮಂತ್ರಿಗಳು ಸದನವನ್ನೇ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಆಗ ನಾನು ಕೇವಲ ನಿಯೋಜಿತ ಮುಖ್ಯಮಂತ್ರಿ. ರಾಜಭವನದ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆ ಮಾಡಿರುತ್ತದೆ ಎಂಬುದು ಇವರಿಗೆ ತಿಳಿಯದೆ?

ಪ್ರಮಾಣವನ್ನೇ ಸ್ವೀಕರಿಸದ ನಿಯೋಜಿತ ಮುಖ್ಯಮಂತ್ರಿ ಯಾವುದಾದರೂ ಆದೇಶ ನೀಡಲು ಸಾಧ್ಯವೇ? ಇಷ್ಟಕ್ಕೂ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭಕ್ಕೂ, ಪಕ್ಷದ ಕಾರ್ಯಕ್ರಮಕ್ಕೂ ಹೋಲಿಕೆಯೇ?

ಇಷ್ಟು ಸಾಮಾನ್ಯ ತಿಳಿವಳಿಕೆ ಸ್ವತಃ ಮುಖ್ಯಮಂತ್ರಿ ಹಾಗೂ ಸಂಸದೀಯ ಸಚಿವರಿಗೆ ಇಲ್ಲ ಎಂದರೆ ಏನು ಹೇಳುವುದು? ಇಂಡಿಯಾ ಒಕ್ಕೂಟದ ಸಭೆಗೆ ಬಂದ ಹೊರರಾಜ್ಯಗಳ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ಚಾಕರಿಗೆ ಬಿಟ್ಟಿದ್ದು ತಪ್ಪು ಎಂಬುದು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗಿಳಿಪಾಠ ಒಪ್ಪಿಸುವ ಸ್ವಯಂಘೋಷಿತ ಸಂವಿಧಾನ ತಜ್ಞರಿಗೆ ಶೋಭೆಯೇ?

ಉಪ ಸಭಾಧ್ಯಕ್ಷರು ದಲಿತರೆನ್ನುವ ಟ್ರಂಪ್ ಕಾರ್ಡ್ ತೇಲಿಬಿಟ್ಟಿದೆ ಸರಕಾರ. ದಲಿತರೆನ್ನುವ ಕಾರಣಕ್ಕೆ ಉಪ ಸಭಾಧ್ಯಕ್ಷರ ಮೇಲೆ ಅನುಕಂಪದ ಹೊಳೆ ಹರಿಸುವ ಕಾಂಗ್ರೆಸ್, ಅವರಿಗೆ ಸಚಿವ ಸ್ಥಾನವನ್ನೇ ನೀಡಬಹುದಿತ್ತು. ನೀಡಲಿಲ್ಲ ಯಾಕೆ? ಶಾಸಕ ಪುಟ್ಟರಂಗಶೆಟ್ಟಿ ಅವರು ಬೇಡವೇ ಬೇಡ ಎಂದ ಹುದ್ದೆಯನ್ನು ರುದ್ರಪ್ಪ ಲಮಾಣಿ ಅವರ ತಲೆಗೆ ಕಟ್ಟಿದ್ದು ಯಾಕೆ?

ಇಂಥ ಅತಿಯಾದ ಜಾಣತನ, ಭಂಡತನ ಯಾಕೆ? ಸಂಪುಟ ರಚನೆ ವೇಳೆ ರುದ್ರಪ್ಪ ಲಮಾಣಿ ಅವರು ದಲಿತರೆನ್ನುವುದು ಕಾಂಗ್ರೆಸ್’ಗೆ ಗೊತ್ತಿರಲಿಲ್ಲವೇ? ದಲಿತ ಕಾರ್ಡ್ ಬಿಟ್ಟ ಪ್ರಿಯಾಂಕ್ ಖರ್ಗೆ ಅಥವಾ ಕೃಷ್ಣ ಭೈರೇಗೌಡರಿಗೆ ಅಷ್ಟು ದಲಿತಪ್ರೇಮ ಇದ್ದರೆ ಅವರ ಸಚಿವಗಿರಿಯನ್ನು ಲಮಾಣಿ ಅವರಿಗೇ ಬಿಟ್ಟುಕೊಟ್ಟು ಈ ಇಬ್ಬರಲ್ಲಿ ಒಬ್ಬರು ಉಪ ಸಭಾಧ್ಯಕ್ಷರಾಗಲಿ.

ಅಷ್ಟೇ ಅಲ್ಲ; ದಲಿತ ಮುಖ್ಯಮಂತ್ರಿ ಕೂಗು ಕಾಂಗ್ರೆಸ್ ಪಕ್ಷದಲ್ಲಿ ಬಹಳ ದಿನಗಳಿಂದ ಇದೆ. ಹಿಂದೆ ಖರ್ಗೆ ಅವರಿಗೆ ಸಿಎಂ ಹುದ್ದೆ ಕೈ ತಪ್ಪುವಂತೆ ಮಾಡಲಾಗಿತ್ತು. ಈಗ ದಲಿತ ಮುಖ್ಯಮಂತ್ರಿ ಮಾಡಲು ಇದೇ ಸಕಾಲ. ದಲಿತರನ್ನೇ ಸಿಎಂ ಮಾಡಲಿ. ನುಡಿದಂತೆ ನಡೆಯುವ ಪಕ್ಷಕ್ಕೆ ಇದು ಅಸಾಧ್ಯವೇನಲ್ಲ. ಅಲ್ಲವೇ? ಎಂದು ಕಿಡಿಕಾರಿದ್ದಾರೆ.

Related Posts