DRDOನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಮೋಸ ಮಾಡಿದ ಮಾಲಕೊಂಡಯ್ಯ ಮತ್ತು ಇತರರ ವಿರುದ್ಧ ದೂರು! » Dynamic Leader
December 5, 2024
ಉದ್ಯೋಗ ಕ್ರೈಂ ರಿಪೋರ್ಟ್ಸ್

DRDOನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಮೋಸ ಮಾಡಿದ ಮಾಲಕೊಂಡಯ್ಯ ಮತ್ತು ಇತರರ ವಿರುದ್ಧ ದೂರು!

DRDOನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, 35 ಜನರಿಂದ 82 ಲಕ್ಷ ರೂಪಾಯಿಗಳನ್ನು ಪಡೆದು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಂಚಿಸಿರುವ DRDO ಉದ್ಯೋಗಿಗಳಾದ 1) ಮಾಲಕೊಂಡಯ್ಯ 2) ಪಿ.ಎಸ್.ನಂಜಮ್ಮ  3) ಸತ್ಯನಾರಾಯಣ, 4) ಡಿ.ಜಿ.ರಾವ್, 5) ಸಲೀಂ 6) ಮಾಲಕೊಂಡಯ್ಯನ ಪತ್ನಿ ರಮಣಮ್ಮ ಮತ್ತು ಇತರರ ವಿರುದ್ದ ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿರುವ ಪಿ ಅಂಡ್ ಟಿ ಕಾಲೋನಿ ನಿವಾಸಿ ಷಣ್ಮುಗಂ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

MEG ಸೆಂಟರ್‌ನಲ್ಲಿ ಕೆಲಸ ಮಾಡಿ 2019ರಲ್ಲಿ ನಿವೃತ್ತಿ ಹೊಂದಿರುವ ಷಣ್ಮುಗಂ ಅವರನ್ನು ಕೆಲಸದ ವಿಚಾರದಲ್ಲಿ ಪರಿಚಯ ಮಾಡಿಕೊಂದಿದ್ದ ಮಾಲಕೊಂಡಯ್ಯ, “DRDOನಲ್ಲಿ 1200 ಹುದ್ದೆಗಳಿಗೆ  ಅರ್ಜಿ ಕರೆದಿದ್ದಾರೆ; ಯಾರಾದರು ಅಭ್ಯರ್ಥಿಗಳು (Candidate) ಇದ್ದರೆ ಹೇಳು; ನೇರವಾಗಿ ನೇಮಕಾತಿ (Appointment) ಕೊಡಿಸುತ್ತೇನೆ; ಪ್ರತಿ ವ್ಯಕ್ತಿಗೆ 2 ಲಕ್ಷ ರೂಪಾಯಿ ಆಗುತ್ತೆ ಎಂದು ಹೇಳಿದ್ದಾರೆ. ಇದನ್ನು ನಿಜವೆಂದು ನಂಬಿದ ಷಣ್ಮುಗಂ, ಬೆಂಗಳೂರು ಮತ್ತು ತಮಿಳುನಾಡಿನಿಂದ ಸುಮಾರು 35 ಜನರನ್ನು ಮಾಲಕೊಂಡಯ್ಯ ಅವರಿಗೆ ಹಂತ ಹಂತವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ಮಾಲಕೊಂಡಯ್ಯ ಅವರು, ಸದರಿ 35 ಜನರಿಗೆ ಕೆಲಸ ಕೊಡಿಸುವ ಬರವಸೆ ನೀಡಿ, ಬಣ್ಣದ ಮಾತುಗಳನ್ನು ಹಾಡಿ, ಅವರಿಂದ 82 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

ಹಣಕೊಟ್ಟವರಿಗೆ ಅನುಮಾನ ಬರಬಾರದು ಎಂಬುದಕ್ಕಾಗಿ, DRDOನಲ್ಲಿ ಅಕೌಂಟ್ ಆಫೀಸರ್ ಆಗಿರುವ ಪಿ.ಎಸ್.ನಂಜಮ್ಮ ಅವರನ್ನು ಬಳಸಿಕೊಂಡು, ದಾಖಲೆಗಳನ್ನು ದೃಢೀಕರಿಸಿ ಎಲ್ಲರಿಗೂ ನೀಡುತ್ತಿದ್ದರು. ಕೇಳಿದರೆ, “ಅಪಾಯಿಂಟ್ಮೆಂಟ್ ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ನೀವು ಹಣ ಕೊಟ್ಟಿರುವುದರಿಂದ ನಿಮಗೆ ನೇರವಾಗಿ ಕೆಲಸ ಸಿಗಲಿದೆ. ನೇರವಾಗಿ ಕೆಲಸ ಸಿಗಬೇಕಾದರೆ ಒಳಗಿರುವ ಅಧಿಕಾರಿಗಳು ‘ಇವರು ನನಗೆ ಪರಿಚಯವಿದ್ದಾರೆ; ಇವರ ನಡವಳಿಕೆ ಚನ್ನಾಗಿದೆ’ ಎಂದು ಹೇಳಿ ದಾಖಲೆಯನ್ನು ದೃಢೀಕರಿಸಿ ಕೊಡಬೇಕು. ಆಗ ನಿಮಗೆ ಕೆಲಸ ಸಿಗುತ್ತದೆ” ಎಂದು ಹೇಳಿದ್ದಾರೆ.

ನಂತರ, ದಾಖಲೆಗಳ ಪರಿಶೀಲನೆಯೆಂಬ ಹೊಸ ನಾಟಕವನ್ನು ಶುರು ಮಾಡಿದ್ದಾರೆ. ಅದಕ್ಕಾಗಿ, ನ್ಯೂ ತಿಪ್ಪಸಂದ್ರ ಬಳಿ ಮಾಲಕೊಂಡಯ್ಯ ಅವರ ಸಂಬಂಧಿ ನಾಗೇಂದ್ರ ನಡೆಸುವ ಪಿಜಿಯ ಬಳಿಗೆ ಎಲ್ಲರನ್ನು ಕರೆಸಿಕೊಂಡು, ಅಲ್ಲಿಗೆ ನಕಲಿ DRDO ಅಧಿಕಾರಿಗಳನ್ನು ಕರೆಸಿ, ಇವರೆಲ್ಲರು DRDO ಅಧಿಕಾರಿಗಳೆಂದು ನಂಬಿಸಿ, ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ನಂತರ ಹಣ ನೀಡಿ, ಕೆಲಸಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಅನುಮಾನ ಬರಬಾರದು ಎಂಬುದಕ್ಕಾಗಿ, ಮುಂದೆ ನಿಂತು ಹಣ ಪಡೆದುಕೊಟ್ಟ ಷಣ್ಮುಗಂ, ಕಮಲಕಣ್ಣನ್, ಶಂಕರ್, ಗಣೇಶ್, ರಾಮ್ ಪ್ರಸಾದ್ ಮತ್ತು ನಾಗರಾಜ್ ಮುಂತಾದವರನ್ನು DRDO ಕಛೇರಿಯ ಒಳಗೆ ಕರೆಸಿಕೊಂಡು, ಅಲ್ಲಿ ಮಾಲಕೊಂಡಯ್ಯನೊಂದಿಗೆ ಶಾಮೀಲಾಗಿರುವ ಡಿ.ಜಿ.ರಾವ್, ಸಲೀಂ ಮುಂತಾದ ಇನ್ನೂ ಕೆಲವು ಆಫೀಸರ್‌ಗಳೊಂದಿಗೆ ಮಾತನಾಡಿಸಿ ನಂಬಿಸುವ ನಾಟಕ ಮಾಡಿದ್ದಾರೆ.

ಅಧಿಕಾರಿಗಳು ಮಾಲಕೊಂಡಯ್ಯ ಹೇಳಿ ಕೊಟ್ಟಂತೆ ‘ಇನ್ನು ಹತ್ತು ದಿನಗಳಲ್ಲಿ ನಿಮ್ಮ ಕೆಲಸ ಆಗಿ ಬಿಡುತ್ತದೆ’, ‘ಲಿಸ್ಟ್ ಆಗಿದೆ’, ‘ಇನ್ನು ಸಹಿ ಆಗಿಲ್ಲ’ ಎಂದು ಭರವಸೆಯ ಮಾತುಗಳನ್ನು ಹೇಳಿ ಕಳುಹಿಸಿದ್ದಾರೆ. ‘DRDO ಅಧಿಕಾರಿಗಳಿಗೆ ಹಣ ಕೊಟ್ಟಿದ್ದೇನೆ; ಅವರೆಲ್ಲರು ನಮ್ಮ ಕೆಲಸ ಮಾಡಿಕೊಡುತ್ತಾರೆ’ ಎಂದು ದೂರುದಾರ ಷಣ್ಮುಗಂ ಬಳಿ ಮಾಲಕೊಂಡಯ್ಯ ಹೇಳಿಕೊಂಡಿದ್ದಾರೆ.    

ಕೆಲಸ ಕೊಡುವ ವಿಚಾರವನ್ನು ಹೀಗೆ ಎಳೆಯುತ್ತಾ ಹೋಗುವ ಮಾಲಕೊಂಡಯ್ಯ, ಒತ್ತಡ ಹೆಚ್ಚಾದಾಗ ‘ಜಾಬ್ ಲಿಸ್ಟ್’ ಕೊಡಿಸುವ ಕಾರ್ಯವನ್ನು ಮಾಡಿದ್ದಾರೆ. ಹಣ ಕೊಟ್ಟ ಎಲ್ಲರಿಗೂ DRDO ಟೆಕ್ನಿಕಲ್ ಆಫೀಸರ್ ಸತ್ಯನಾರಾಯಣ ಮತ್ತು ಅಕೌಂಟ್ ಆಫೀಸರ್ ಪಿ.ಎಸ್.ನಂಜಮ್ಮ ಮೂಲಕ ನಕಲಿ ಜಾಬ್ ಲಿಸ್ಟ್ ತಯಾರಿಸಿ ಎಲ್ಲರಿಗೂ ಹಂಚಿಕೆ ಮಾಡಿದ್ದಾರೆ.

ಆದರೆ, ಹಣಕೊಟ್ಟವರಿಗೆ ಈ ಜಾಬ್ ಲಿಸ್ಟ್, ದಾಖಲೆ ದೃಢೀಕರಣ ಎಲ್ಲವೂ ನಾಟಕ, ನಮ್ಮಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ, ಮಾಲಕೊಂಡಯ್ಯ ಕೆಲವರಿಗೆ ಚೆಕ್ ನೀಡಿದ್ದಾರೆ. ಇನ್ನು ಕೆಲವರಿಗೆ ಹಣ ಕೊಡಲು ಸಮಯ ಕೇಳಿ, ಹಣ ಕೊಟ್ಟವರನ್ನು ತಿಂಗಳು ಗಟ್ಟಲೆ ಕಛೇರಿಯ ಬಳಿ ತಿರುಗಾಡುವಂತೆ ಮಾಡಿದ್ದಾರೆ. ಕೊಟ್ಟಿದ್ದ ಚೆಕ್ ಯಾವುದರಲ್ಲೂ ಹಣವಿಲ್ಲ. ಎಲ್ಲವೂ ಬೋನ್ಸ್ ಆಗಿದೆ.

ಮೊಬೈಲಿಗೆ ಕರೆ ಮಾಡಿದರೆ ಪಿಕ್ ಮಾಡುವುದಿಲ್ಲ, ಕಛೇರಿ ಬಳಿಯೂ ಸಿಗುವುದಿಲ್ಲ. ಮನೆ ವಿಳಾಸ ಹುಡುಕಿಕೊಂಡು ಹೋದರೆ, ಮಾಲಕೊಂಡಯ್ಯ ಹೆಂಡತಿ ರಮಣಮ್ಮನನ್ನು ಬಿಟ್ಟು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬಯ್ಯುವಂತೆ ಮತ್ತು ಅಮಾನುಷ್ಯವಾಗಿ ವರ್ತಿಸುವಂತೆ ಮಾಡಿದ್ದಾರೆ. ಇದರಿಂದ ಬೇಸತ್ತ ಷಣ್ಮುಗಂ ತಾಳಲಾರದೆ, ತಿಳಿದವರ ಬಳಿ, ಮಗ-ಮಗಳ ಬಳಿ, ಬಡ್ಡಿಗೆ ಎಂದು ಇದುವರೆಗೆ ಸುಮಾರು 25 ಲಕ್ಷ ರೂಪಾಯಿಗಳನ್ನು ಸಾಲ ಮಾಡಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಂಚಿದ್ದಾರೆ.

ಈ ರೀತಿ ಕೆಲಸ ಕೊಡಿಸುವುದಾಗಿ ನಂಬಿಸಿ, 35 ಜನರಿಂದ ರೂ.82 ಲಕ್ಷ ಹಣವನ್ನು ಪಡೆದು, ವಂಚನೆ ಮಾಡಿರುವ ಮಾಲಕೊಂಡಯ್ಯ, ಕಾಲ ಕಳೆದಂತೆ ಹಣಕೊಟ್ಟವರ ಬಳಿ “ನನಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ… ಎಲ್ಲರ ಹಣ ಷಣ್ಮುಗಂ ಬಳಿ ಇದೆ… ಆತನ ಬಳಿಯೇ ಹಣ ಪಡೆದುಕೊಳ್ಳಿ… ಏನಿದ್ದರೂ ಆತನ ಬಳಿಯೇ ಮಾತನಾಡಿಕೊಳ್ಳಿ… ನನಗೆ ಯಾರೂ ಪೋನ್ ಮಾಡಬೇಡಿ” ಎಂದು ಹೇಳಿ, ಈ ವಿಚಾರದಿಂದ ದೂರ ಸರಿದುಕೊಂಡಿದ್ದಾರೆ.

ಕೇಳಿದರೆ, “ಕೆಲವರಿಗೆ ಹಣ ಕೊಟ್ಟಂತೆ ಬಾಕಿ ಉಳಿದವರಿಗೂ ನೀನೆ ಹಣ ಕೊಡು; ನಿಮ್ಮ ಜಮೀನು ಮಾರಿ ಕೊಡು ಎಂದು ದುರಹಂಕಾರದಿಂದ ಮಾತನಾಡಿದ್ದಾರೆ. “ನಾನು ಯಾವುದೇ ಹಣ ತಿಂದಿಲ್ಲ… ನೀನು ಏನು ಬೇಕಾದರು ಮಾಡಿಕೊ… ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ… ನನಗೆ ಇನ್ನು ಮುಂದೆ ಪೋನ್ ಮಾಡಬೇಡ” ಎಂದು ಹೇಳಿ ಷಣ್ಮುಗಂ ಅವರನ್ನು ಗದರಿಸಿ ಸಂಪರ್ಕವನ್ನು ಕಡಿತ ಮಾಡಿಕೊಂಡಿದ್ದಾರೆ. ಮೋಸಹೋದ ಜನರು ಅನ್ಯ ಮಾರ್ಗವಿಲ್ಲದೆ, ಈಗ ಷಣ್ಮುಗಂ ಅವರಿಗೆ ದಿನನಿತ್ಯ ಪೋನ್ ಮಾಡಿ, ಹಣ ಕೊಡುವಂತೆ ತೊಂದರೆ ನೀಡುತ್ತಿದ್ದಾರೆ.

ಕೆಲಸ ಕೊಡಿಸುವುದಾಗಿ ನಂಬಿಸಿ, ಜನರನ್ನು ಕರೆದುಕೊಂಡು ಬರುವಂತೆ ಮಾಡಿದ ಮಾಲಕೊಂಡಯ್ಯ, ಅವರಿಂದ ಹಣ ಪಡೆದು, ಅವರು ನೀಡುವ ದಾಖಲೆಗಳನ್ನು DRDOನಲ್ಲಿ ಅಕೌಂಟ್ ಆಫೀಸರ್ ಆಗಿ ಕೆಲಸ ಮಾಡುವ ಪಿ.ಎಸ್.ನಂಜಮ್ಮ ಮತ್ತು ಇತರರಿಂದ ದೃಢೀಕರಿಸಿ ಕೊಟ್ಟು, ನಿಮಗೆ ನೇರವಾಗಿ ನೇಮಕಾತಿ ಕೊಡುತ್ತೇನೆಂದು ಎಲ್ಲರನ್ನೂ ನಂಬಿಸಿದ್ದಾರೆ. 28 ಹುಡುಗರನ್ನು ಪಿಜಿಯಲ್ಲಿ ಕೂರಿಸಿ, ದಾಖಲೆಗಳ ಪರಿಶೀಲನೆ ಎಂದು ನಾಟಕವಾಡಿ ನಂತರ, DRDOನಲ್ಲಿ ಟೆಕ್ನಿಕಲ್ ಆಫೀಸರ್ ಆಗಿರುವ ಸತ್ಯನಾರಾಯಣ ಮತ್ತು ಅಕೌಂಟ್ ಆಫೀಸರ್ ಪಿ.ಎಸ್.ನಂಜಮ್ಮ ಜೊತೆ ಸೇರಿಕೋಂಡು Job List ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಎಲ್ಲರಿಗೂ ಹಂಚಿದ್ದಾರೆ.

ಇವರು ಬರೀ ಷಣ್ಮುಗಂ ಕಡೆಯಿರುವ 35 ಜನರಿಗೆ ಮಾತ್ರ ಏಮಾರಿಸಿಲ್ಲ. ಇವರಿಂದ ಏಮಾರಿದವರು ನೂರಾರು ಜನರಿದ್ದಾರೆ. ಇವರೆಲ್ಲ ನೆಪ ಮಾತ್ರಕ್ಕೆ DRDOನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಮಾಡುತ್ತಿರುವುದೆಲ್ಲ DRDO ಹೆಸರಿನಲ್ಲಿ ನಕಲಿ ನೇಮಕಾತಿ ದಂಧೆ. ಡಿ ಗ್ರೂಪ್ ನೌಕರನಾದ ಮಾಲಕೊಂಡಯ್ಯನಿಗೆ ಒಳಗಿರುವ ಆಫೀಸರ್‌ಗಳು ಬೆನ್ನೆಲುಬಾಗಿ ನಿಂತು ನಕಲಿ ದಾಖಲೆಗಳನ್ನು ತಯಾರಿಸಿ ಕೊಡುತ್ತಿರುವುದು ಷಣ್ಮುಗಂ ನೀಡಿರುವ ದೂರಿನಿಂದ ಬಹಿರಂಗವಾಗಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.         

Related Posts