ತಾಕತ್ತಿದ್ದರೆ ಹಿಂದೂ ಅವಿಭಜಿತ ಕುಟುಂಬ ಕಾನೂನು ರದ್ದುಗೊಳಿಸಿ: ಮೋದಿಗೆ ಓವೈಸಿ ಸವಾಲು! » Dynamic Leader
October 4, 2024
ರಾಜಕೀಯ

ತಾಕತ್ತಿದ್ದರೆ ಹಿಂದೂ ಅವಿಭಜಿತ ಕುಟುಂಬ ಕಾನೂನು ರದ್ದುಗೊಳಿಸಿ: ಮೋದಿಗೆ ಓವೈಸಿ ಸವಾಲು!

ಭೋಪಾಲ್‌ನಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಾದಿಸಿದ ಯುಸಿಸಿ ಅಗತ್ಯದ ಪ್ರತಿಪಾದನೆ ವಿರುದ್ಧ ಕಠಿಣ ಪದಗಳಲ್ಲಿ ಕಿಡಿಕಾರಿರುವ ಓವೈಸಿ, ಇಸ್ಲಾಂನಲ್ಲಿ ಮದುವೆ ಎನ್ನುವುದು ಒಂದು ಒಪ್ಪಂದ. ಇದು ಬೇರೆ ಧರ್ಮಗಳಲ್ಲಿ ಇರುವಂತೆ ಅಲ್ಲ. ಸಂಸ್ಕೃತಿಯ ಹಕ್ಕು ಒಂದು ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.

ಏಕರೂಪ ನಾಗರಿಕ ಕಾನೂನು ಪರವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಭಾರತದ ವೈವಿಧ್ಯತೆ ಹಾಗೂ ಬಹುತ್ವವು ಒಂದು ಸಮಸ್ಯೆ ಎಂಬುದಾಗಿ ಪ್ರಧಾನಿ ಮೋದಿ ಪರಿಗಣಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಎಚ್‌ಯುಎಫ್ ರದ್ದುಗೊಳಿಸಲು ಸವಾಲು:
“ಆದಾಯ ತೆರಿಗೆ ಇಲಾಖೆಯ ಹಿಂದೂ ಅವಿಭಜಿತ ಕುಟುಂಬದ (ಎಚ್‌ಯುಎಫ್) ಅಡಿ, ಹಿಂದೂಗಳಿಗೆ ಮಾತ್ರವೇ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. 29ನೇ ವಿಧಿ-ಸಂಸ್ಕೃತಿಯ ಹಕ್ಕು ಒಂದು ಮೂಲಭೂತವಾದ ಹಕ್ಕು. ಪ್ರಧಾನಿ ಇದನ್ನು ಅರ್ಥ ಮಾಡಿಕೊಂಡಿದ್ದಾರೆಯೇ? ಅವರಿಗೆ ಅರ್ಥವಾಗಿದೆ ಎಂದು ನನಗೆ ಅನಿಸುತ್ತಿಲ್ಲ” ಎಂದಿರುವ ಓವೈಸಿ, ಎಚ್‌ಯುಎಫ್ ವಿನಾಯತಿಯನ್ನು ರದ್ದುಗೊಳಿಸುವ ಧೈರ್ಯವಿದೆಯೇ? ಹಿಂದೂ ಅವಿಭಜಿತ ಕುಟುಂಬ ತೆರಿಗೆ ರಿಯಾಯಿತಿಯು ಸಮಾನತೆಯ ಹಕ್ಕಿನ ವಿರುದ್ಧವಾಗಿಲ್ಲವೇ? ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ. ಎಚ್‌ಯುಎಫ್ ಕಾರಣದಿಂದ ದೇಶಕ್ಕೆ ಪ್ರತಿ ವರ್ಷ 3064 ಕೋಟಿ ರೂ ನಷ್ಟ ಉಂಟಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಸಿಖ್ಖರ ಹತ್ತಿರ ಯುಸಿಸಿ ಬಗ್ಗೆ ಮಾತನಾಡಿ:
“ಇಸ್ಲಾಂನಲ್ಲಿ ಮದುವೆ ಎನ್ನುವುದು ಒಂದು ಒಪ್ಪಂದ. ಇದು ಬೇರೆ ಧರ್ಮಗಳಿಗಿಂತ ವಿಭಿನ್ನ. ನೀವು ಎಲ್ಲವನ್ನೂ ಬೆರೆಸುತ್ತೀರಾ? ಯುಸಿಸಿ ಹೆಸರಿನಲ್ಲಿ ನೀವು ಬಹುತ್ವ ಹಾಗೂ ವೈವಿಧ್ಯತೆಯನ್ನು ಕಸಿದುಕೊಳ್ಳುತ್ತೀರಾ? ನಾನು ಪ್ರಧಾನಿಗೆ ಸವಾಲು ಹಾಕುತ್ತೇನೆ. ನಿಮ್ಮ ಬಳಿ 300 ಸಂಸದರಿದ್ದಾರೆ. ಹಿಂದೂ ಅವಿಭಜಿತ ಕುಟುಂಬ ವಿನಾಯಿತಿ ರದ್ದುಗೊಳಿಸಿ. ಪಂಜಾಬ್‌ಗೆ ಹೋಗಿ ಸಿಖ್ಖರ ಬಳಿ ಯುಸಿಸಿ ಬಗ್ಗೆ ಮಾತನಾಡಿ. ಅವರ ಪ್ರತಿಕ್ರಿಯೆ ಹೇಗೆ ಇರುತ್ತದೆ ಎಂದು ನೋಡಿ” ಎಂಬುದಾಗಿ ಕಿಡಿಕಾರಿದ್ದಾರೆ.

“ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನದ ಬಗ್ಗೆ ಏಕೆ ಅಂತಹ ಪ್ರೀತಿ? ಅವರು ಆಲೋಚಿಸುವ ಸಾಫ್ಟ್‌ ವೇರ್ ಅನ್ನು ಬದಲಿಸಬೇಕು. ಪಾಕಿಸ್ತಾನ ಮತ್ತು ಈಜಿಪ್ಟಿನ ವಿಚಾರದಲ್ಲಿ ಭಾರತದ ಮುಸ್ಲಿಮರು ಏನು ಮಾಡಬೇಕಿದೆ? ನೀವು ನಮ್ಮನ್ನು ಕಡೆಗಣಿಸುತ್ತಿದ್ದೀರಾ? ಇದು ದೇಶ ವಿರೋಧಿ ಸಂಗತಿ” ಎಂದು ಈಜಿಪ್ಟ್, ಪಾಕಿಸ್ತಾನ ಮುಂತಾದ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ತ್ರಿವಳಿ ತಲಾಖ್ ಬಳಕೆಯಲ್ಲಿ ಇಲ್ಲ ಎಂಬ ಮೋದಿ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.

“ನಿಮಗೆ ಮಣಿಪುರಕ್ಕೆ ಹೋಗಲು ಆಗುತ್ತಿಲ್ಲ. ಆದರೆ 371ರ ವಿಧಿ ಬಗ್ಗೆ ಮಾತನಾಡುತ್ತೀರಿ. ಗುಜರಾತ್‌ನಲ್ಲಿ ಹಿಂದೂ ಒಬ್ಬ ಮುಸ್ಲಿಮನಿಗೆ ಮನೆ ಮಾರಾಟ ಮಾಡುವಂತೆ ಇಲ್ಲ. ಹಿಮಾಚಲದ ರೈತನಿಂದ ಯಾವ ವಿದೇಶಿಗನೂ ಭೂಮಿ ಖರೀದಿಸುವಂತೆ ಇಲ್ಲ. ಪಂಜಾಬ್‌ಗೆ ಹೋಗಿ ಇದನ್ನು ಹೇಳಿ. ಮುಸ್ಲಿಮರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಪೆ: ವಿಜಯ ಕರ್ನಾಟಕ

Related Posts