ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರ ಕೊಡುವ ಕಾಯ್ದೆಯನ್ನು ಸೋಲಿಸಿದರೆ, ಸಂಸತ್ತಿನ ಚುನಾವಣೆಗೆ ಅದುವೇ ಸೆಮಿಫೈನಲ್! ಅರವಿಂದ್ ಕೇಜ್ರಿವಾಲ್ » Dynamic Leader
December 3, 2024
ರಾಜಕೀಯ

ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರ ಕೊಡುವ ಕಾಯ್ದೆಯನ್ನು ಸೋಲಿಸಿದರೆ, ಸಂಸತ್ತಿನ ಚುನಾವಣೆಗೆ ಅದುವೇ ಸೆಮಿಫೈನಲ್! ಅರವಿಂದ್ ಕೇಜ್ರಿವಾಲ್

ಡಿ.ಸಿ.ಪ್ರಕಾಶ್ ಸಂಪಾದಕರು

2014ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಅಂದಿನಿಂದ ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ನಿರ್ಧಾರಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಾ ಬರುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿದೆ. ಮತ್ತು 2019ರಲ್ಲಿ ನ್ಯಾಯಾಧೀಶ ಅಶೋಕ್ ಭೂಷಣ್ ಅವರ ಪೀಠವು “ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ” ಎಂದು ತೀರ್ಪು ನೀಡಿತ್ತು. ತರುವಾಯ, ಕೇಂದ್ರ ಸರ್ಕಾರದ ಅಧಿಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಯಿತು.

ಈ ಪ್ರಕರಣದಲ್ಲಿ ಸಾಂವಿಧಾನಿಕ ಪೀಠದ 5 ನ್ಯಾಯಮೂರ್ತಿಗಳು ಇತ್ತೀಚೆಗೆ ಸರ್ವಾನುಮತದ ತೀರ್ಪು ನೀಡಿದರು. ನ್ಯಾಯಮೂರ್ತಿಗಳ ತೀರ್ಪಿನಲ್ಲಿ, ‘‘2019ರಲ್ಲಿ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ಪೀಠ ನೀಡಿದ ತೀರ್ಪಿಗೆ ಒಮ್ಮತವಿಲ್ಲ; ಜನರ ಹಿತವನ್ನು ಈಡೇರಿಸಲಿಕ್ಕಾಗಿಯೇ ಕಾನೂನುಗಳನ್ನು ಅಂಗೀಕರಿಸುವ ಅಧಿಕಾರವನ್ನು ಶಾಸಕಾಂಗ ಸಭೆಗಳಿಗೆ ನೀಡಲಾಗಿದೆ.

ಇದು ಕೇಂದ್ರಾಡಳಿತ ಪ್ರದೇಶವಾಗಿದ್ದರೂ, ದೆಹಲಿ ಸರ್ಕಾರ ಒಕ್ಕೂಟದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ನೀತಿ ಎಂದರೆ ನಮ್ಮ ರಾಜಕೀಯ ಶಾಸನದ ಮೂಲಭೂತ ರಚನೆಯ ಅಂಗ. ಕೆಲವು ನಿರ್ದಿಷ್ಟ ಅಂಶಗಳಲ್ಲಿ ಮಾತ್ರ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸುವ ಅಧಿಕಾರವನ್ನು ಹೊಂದಿರುತ್ತದೆ. ಅಧಿಕಾರಿಗಳು, ಸಚಿವರ ಆದೇಶವನ್ನು ಕಾರ್ಯಗತಗೊಳಿಸುವುದನ್ನು ತಡೆದರೆ, ಜಂಟಿ ಹೊಣೆಗಾರಿಕೆಗೆ ತೊಂದರೆಯಾಗುತ್ತದೆ.

ವಿಧಾನಸಭೆಯ ಅಧಿಕಾರಕ್ಕೆ ಹೊರಗೆ ಇರುವ ಕೆಲವು ಅಂಶಗಳಲ್ಲಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ಮಧ್ಯೆ ಪ್ರವೇಶಿಸಬಹುದು. ಜನರ ಆಯ್ಕೆಯನ್ನು ಪ್ರತಿನಿಧಿಸುವ ಅಧಿಕಾರವನ್ನು ಶಾಸನಸಭೆಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಆಡಳಿತದ ಅಧಿಕಾರ, ಜನರಿಂದ ಆಯ್ಕೆಯಾದವರೊಂದಿಗೆ ಮಾತ್ರ ಇರಬೇಕು. ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್‌ಗಿಂತ ಮುಖ್ಯಮಂತ್ರಿಗೆ ಹೆಚ್ಚಿನ ಅಧಿಕಾರವಿದೆ” ಎಂದು ಹೇಳಿದೆ.

ಆದರೆ, ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕವಾದ ತೀರ್ಪನ್ನು ರದ್ದುಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರ ದೆಹಲಿಯ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ ನೀಡುವ ತುರ್ತು ಕಾನೂನನ್ನು ರಾತ್ರೋರಾತ್ರಿ ಜಾರಿಗೆ ತಂದಿದೆ. ಜನರಿಂದ ಆಯ್ಕೆಯಾದ ಶಾಸಕಾಂಗಕ್ಕೆ ಅಧಿಕಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನಲೆಯಲ್ಲಿ, ‘ಯಾವುದೇ ಶಾಸಕಾಂಗ ಅಥವಾ ನ್ಯಾಯಾಲಯವು ಆದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂಬ ಷರತ್ತಿನೊಂದಿಗೆ ಕೇಂದ್ರ ಸರ್ಕಾರ ತುರ್ತು ಕಾನೂನನ್ನು ಜಾರಿಗೆ ತಂದಿದೆ.

ಮುಂದಿನ 6 ತಿಂಗಳೊಳಗೆ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದರೆ ಮಾತ್ರ ಈ ಸುಗ್ರೀವಾಜ್ಞೆ ಕಾನೂನಾಗಲಿದೆ. ಈ ಹಿನ್ನಲೆಯಲ್ಲಿ ದೆಹಲಿಯ ಆಮ್ ಆದ್ಮಿ ಸರ್ಕಾರವು ಈ ಕಾನೂನನ್ನು ಜಾರಿಗೆ ತರದಂತೆ ತಡೆಯಲು ಪ್ರಯತ್ನಿಸುತ್ತಿದೆ. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಬಹುಮತವನ್ನು ಹೊಂದಿವೆ.

ಇದರಿಂದಾಗಿ ವಿರೋಧ ಪಕ್ಷಗಳ ಬೆಂಬಲ ಪಡೆಯಲು ದೆಹಲಿ ಸರ್ಕಾರ ತೀವೃತೆಯನ್ನು ತೋರುತ್ತಿದೆ. ಇದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಇದೀಗ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿಮಾಡಿ ಬೆಂಬಲ ಕೋರಿದ್ದಾರೆ. ಬಳಿಕ ಮಾತನಾಡಿದ ಅರವಿಂದ್ ಕೇಜ್ರಿವಾಲ್, “ರಾಜ್ಯಸಭೆಯಲ್ಲಿ ತುರ್ತು ಕಾಯ್ದೆಯನ್ನು ಸೋಲಿಸಿದರೆ, ಅದುವೇ 2024ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಪಂದ್ಯ ಆಗಲಿದೆ. 2024ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಸಂದೇಶ ಇದಾಗಿರುತ್ತದೆ” ಎಂದು ಹೇಳಿದರು.

   

Related Posts