ಅದಾನಿಗಾಗಿ ಸಂಸತ್ತಿನಲ್ಲಿ ಸುಳ್ಳು ಹೇಳಿದ ಸೆಬಿ ಮತ್ತು ನಿರ್ಮಲಾ ಸೀತಾರಾಮನ್: ಸುಪ್ರೀಂನಿಂದ ಸತ್ಯ ಬಯಲು!
ಅದಾನಿ ವಿಚಾರದಲ್ಲಿ ಸೆಬಿ ಸಂಸ್ಥೆ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಹೇಳಿದ ಸುಳ್ಳುಗಳು ಈಗ ಬಯಲಾಗಿದೆ.
ಕೆಲವು ತಿಂಗಳ ಹಿಂದೆ, ಹೆಸರಾಂತ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಸಂಸ್ಥೆ, ಅದಾನಿ ಸಮೂಹದ ಕಂಪನಿಗಳ ವಿರುದ್ಧ ವಂಚನೆ, ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಮಾಡಿತ್ತು. ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗುವ ಮೂಲಕ ತನ್ನ ಕಂಪನಿಯ ಷೇರು ಬೆಲೆಯನ್ನು ಹೆಚ್ಚಿಸಿಕೊಂಡಿತು ಎಂದು ತನ್ನ ವರದಿಯಲ್ಲಿ ಹಿಂಡೆನ್‌ಬರ್ಗ್ ಆರೋಪಿಸಿತು.
ಈ ವರದಿಯ ನಂತರ, ಅದಾನಿ ಕಂಪನಿಗಳ ಷೇರು ಮೌಲ್ಯಗಳು ತೀವ್ರ ಕುಸಿತವನ್ನು ಅನುಭವಿಸಿದವು. ಇದರಿಂದಾಗಿ ಅದಾನಿ ಕಂಪನಿಯ ಮೌಲ್ಯವು ಹಲವು ಕೋಟಿ ರೂಪಾಯಿಗಳ ಕುಸಿತವನ್ನು ಕಂಡಿತು. ಇದರಿಂದಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅದಾನಿ 24ನೇ ಸ್ಥಾನಕ್ಕೆ ಕುಸಿದರು. ಅವರ ಆಸ್ತಿ ಮೌಲ್ಯವು ಲಕ್ಷ ಕೋಟಿಗಳಷ್ಟು ಕುಸಿದಿದೆ ಎಂದು ವರದಿಯಾಗಿದೆ.
ಅದಾನಿ ಷೇರುಗಳ ಈ ಕುಸಿತದಿಂದ ಅದಾನಿಯಲ್ಲಿ ಹೂಡಿಕೆ ಮಾಡಿದ್ದ ಎಲ್‌ಐಸಿ ಸೇರಿದಂತೆ ಸಾರ್ವಜನಿಕ ವಲಯದ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸಿದೆ. ಅದಾನಿ ಕಂಪನಿಗಳಲ್ಲಿ ಎಲ್‌ಐಸಿ ರೂ.30,127 ಕೋಟಿ ಹೂಡಿಕೆ ಮಾಡಿತ್ತು. ಜನವರಿ 24 ರಂದು ಇದರ ಮೌಲ್ಯ ರೂ.72,193.87 ಕೋಟಿಗಳಾಗಿದ್ದರೆ, ಅದಾನಿ ಕಂಪನಿಗಳ ಷೇರು ಮೌಲ್ಯ ಕುಸಿತದಿಂದಾಗಿ ಅದರ ಮೌಲ್ಯ ಈಗ ರೂ.26,861.88 ಕೋಟಿಗೆ ಕುಸಿತವನ್ನು ಕಂಡಿದೆ.
ಏತನ್ಮಧ್ಯೆ, ಹಿಂಡೆನ್‌ಬರ್ಗ್ ಕಂಪನಿಯು ಅದಾನಿ ಸಮೂಹದ ದುಷ್ಕೃತ್ಯಗಳನ್ನು ಬಹಿರಂಗಪಡಿಸುವುದರ ಜೊತೆಯಲ್ಲೇ ಷೇರುಪೇಟೆಯ ಮೇಲೆ ನಿಗಾ ಇಡಲು ಸ್ಥಾಪಿತವಾದ ಸೆಬಿ ಸಂಸ್ಥೆಯು, ಅದಾನಿ ಸಮೂಹದ ಅಕ್ರಮಗಳನ್ನು ತಡೆಯದೆ ಮೌನ ವಹಿಸಿದ್ದನ್ನೂ ಪ್ರಶ್ನಿಸಿತು. ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದಾಗ, ‘ಅದಾನಿ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಸೆಬಿ ಸಂಸ್ಥೆಯ ಪರವಾಗಿ ಉತ್ತರಿಸಲಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದೇ ಉತ್ತರವನ್ನು ನೀಡಿದ್ದರು.
ಆದರೆ, ಈ ಸಂಬಂಧ ಸುಪ್ರೀಂ ಕೋರ್ಟ್‌ನ ವಿಚಾರಣೆಯಲ್ಲಿ ‘ಅದಾನಿ ಕಂಪನಿಗಳ ಕುರಿತು ಸೆಬಿ ಇನ್ನೂ ವಿಚಾರಣೆ ನಡೆಸಿಲ್ಲ’ ಎಂದು ಹೇಳಿರುವುದು ಅಘಾತವನ್ನು ಉಂಟುಮಾಡಿದೆ. ಈ ಮೂಲಕ ಸಂಸತ್ತಿನಲ್ಲಿ ಸೆಬಿ ಸಂಸ್ಥೆ ಸುಳ್ಳು ಹೇಳಿರುವುದು ಬಯಲಾಗಿದೆ. ‘ಸಂಸತ್ತಿನಲ್ಲಿ ಅದಾನಿ ಕಂಪನಿ ಬಗ್ಗೆ ವಿಚಾರಣೆ ನಡೆಸಿದ್ದೇವೆ’ ಎಂದು ಹೇಳಿದ ಸೆಬಿ, ಸುಪ್ರೀಂ ಕೋರ್ಟ್‌ನಲ್ಲಿ ‘ತನಿಖೆ ನಡೆಸಿಲ್ಲ’ ಎಂದು ಹೇಳುತ್ತಿದೆ. ‘ಅದಾನಿಯನ್ನು ಉಳಿಸಲು ಸೆಬಿ ಪ್ರಯತ್ನಿಸುತ್ತಿದೆ’ ಎಂದು ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.