ದೆಹಲಿ ಭೇಟಿ ರದ್ದುಗೊಳಿಸಿದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್: ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದೇನೆ! » Dynamic Leader
October 5, 2024
ರಾಜಕೀಯ

ದೆಹಲಿ ಭೇಟಿ ರದ್ದುಗೊಳಿಸಿದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್: ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದೇನೆ!

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ದಿಢೀರ್ ರದ್ದಾಗಿದೆ. “135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಯಾವ ಶಾಸಕರೂ ಇಲ್ಲ. ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದೇನೆ; ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಶಾಸಕರಿಂದ ಬಹುಮತ ಬಂದರೆ, ಅವರಿಗೆ ಶುಭ ಹಾರೈಸುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಸಂದರ್ಶನ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿಪಟ್ಟು ಹಿಡಿದಿರುವುದರಿಂದ ನೂತನ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್  ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ. ವರಿಷ್ಠರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ದೆಹಲಿ ತಲುಪಿದ್ದು, ಇಂದು ರಾತ್ರಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ದೆಹಲಿಗೆ ತೆರಳಬೇಕಿತ್ತು. ಸಂಜೆ 7-30ಕ್ಕೆ ಕೆಐಎಬಿಯಿಂದ ದೆಹಲಿಗೆ ತಲುಪಲು ಏರ್ ಇಂಡಿಯಾ ವಿಮಾನದ ಟಿಕೆಟ್ ಕೂಡಾ ಬುಕ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. ಈ ಕುರಿತು ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ನನ್ನ ಹೊಟ್ಟೆಯಲ್ಲಿ ಸಮಸ್ಯೆಯಾಗಿದೆ, ಸ್ವಲ್ಪ ವಿಶ್ರಾಂತಿ ಬೇಕು” ಎಂದರು.

ನನಗೆ ಸಮಯ ಪ್ರಜ್ಞೆ ಇದೆ. ಹೋರಾಟದ ಕಿಚ್ಚು ಇದೆ. ಹೋರಾಟದಲ್ಲಿ ಯಶಸ್ವು ಸಿಗಬೇಕಾದರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು. ಪೂಜೆ ಪುನಸ್ಕಾರ, ಹುಟ್ಟುಹಬ್ಬ ಆಚರಣೆ ಬಳಿಕ ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದರು.

135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಶಾಸಕರಿಲ್ಲ, ಯಾವುದೇ ನಂಬರ್ ಇಲ್ಲ, ಯಾರನ್ನೂ ದೆಹಲಿಗೆ ಕರೆದೊಯ್ಯಲ್ಲ ಅಂತಾ ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರ ತಂತ್ರದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದರು.

Related Posts