ಕಾಂಗ್ರೆಸ್‌ನ ಉಚಿತ ಕಾರ್ಯಕ್ರಮಗಳನ್ನು ಜಾರಿಗೆ ತರಲು ವರ್ಷಕ್ಕೆ 75,000 ಕೋಟಿ ಬೇಕು: ಇದು ಕಾರ್ಯಸಾಧ್ಯವೇ? » Dynamic Leader
December 13, 2024
ರಾಜಕೀಯ

ಕಾಂಗ್ರೆಸ್‌ನ ಉಚಿತ ಕಾರ್ಯಕ್ರಮಗಳನ್ನು ಜಾರಿಗೆ ತರಲು ವರ್ಷಕ್ಕೆ 75,000 ಕೋಟಿ ಬೇಕು: ಇದು ಕಾರ್ಯಸಾಧ್ಯವೇ?

ಡಿ.ಸಿ.ಪ್ರಕಾಶ್

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಚಲಾವಣೆಯಾದ ಮತಗಳನ್ನು ನಿನ್ನೆ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ 135 ಕ್ಷೇತ್ರಗಳಲ್ಲಿ ಗೆದ್ದು ಏಕ ಬಹುಮತದೊಂದಿಗೆ ಸರ್ಕಾರ ರಚಿಸಲು ಹೊರಟಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷ ಹಲವು ಉಚಿತ ಯೋಜನೆಗಳನ್ನು ಘೋಷಿಸಿತ್ತು.

ಅದರಲ್ಲಿ ಪ್ರಮುಖವಾಗಿ 5 ಗ್ಯಾರಂಟಿಗಳನ್ನು ನೀಡಿತ್ತು. ಮಹಿಳೆಯರಿಗೆ ಮಾಸಿಕ ರೂ.2000 ಪ್ರೋತ್ಸಾಹಧನ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ರೂ.3000 ಮತ್ತು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮುಂತಾದ 5 ಗ್ಯಾರಂಟಿಗಳು ವಿಶೇಷವಾದದ್ದು.

ಈ ಉಚಿತ ಕಾರ್ಯಕ್ರಮಗಳು ಕಾಂಗ್ರೆಸ್ ಗೆಲುವಿಗೆ ನೆರವಾದವು ಎಂದರೆ ಅತಿಶಯೋಕ್ತಿಯಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯ್ ಸೇರಿದಂತೆ ಬಿಜೆಪಿಯ ಮುಖಂಡರು “ಈ ಉಚಿತ ಯೋಜನೆಗಳು ಕಾಂಗ್ರೆಸ್ ನವರ ಸುಳ್ಳು ಭರವಸೆಗಳು” ಎಂದರು. ಆದರೆ, ಕಾಂಗ್ರೆಸ್ ಮುಖಂಡರು ಮನೆ-ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸಿ, ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ಉಚಿತ ಯೋಜನೆಗಳಿಗೆ ಅನುಮತಿ ನೀಡುವುದಾಗಿ ಭರವಸೆ ನೀಡಿದರು.

ನಂತರ ಬಿಜೆಪಿ ಕೂಡ ಇದೇ ರೀತಿಯ ಉಚಿತ ಭರವಸೆಗಳನ್ನು ನೀಡಿತು. ಪ್ರತಿದಿನ ಅರ್ಧ ಲೀಟರ್ ಹಾಲಿನೊಂದಿಗೆ, ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಉಚಿತ ಎಂಬ ಭರವಸೆಯನ್ನೂ ಕೊಟ್ಟಿತು. ಆದರೆ ಫಲಕಾರಿಯಾಗಲಿಲ್ಲ. ಜನತಾ ದಳ (ಎಸ್) ವರ್ಷಕ್ಕೆ 5 ಉಚಿತ ಗ್ಯಾಸ್ ಸಿಲಿಂಡರ್ ಸೇರಿದಂತೆ ಇತರೆ ಉಚಿತಗಳನ್ನು ಘೋಷಿಸಿತು. ಅದುವೂ ಅವರಿಗೆ ಕೈಕೊಡಲಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಈಗ ಸರ್ಕಾರ ರಚಿಸಲಿದೆ. ಆದ್ದರಿಂದ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಯಕ್ರಮಗಳು ಜಾರಿಯಾಗುವುದೇ? ಅದು ಕಾರ್ಯಸಾಧ್ಯವೇ? ಇದಕ್ಕೆ ಪ್ರತಿ ವರ್ಷ ಬೇಕಾಗುವ ಹಣವೆಷ್ಟು? ಅದರ ಬಗ್ಗೆ ಸ್ವಲ್ಪ ನೋಡೋಣ.

Congress Guarantee

ಅಂದರೆ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ ಸರಾಸರಿ 25,800 ಕೋಟಿ ಬೇಕಾಗುತ್ತದೆ. ಅದೇ ರೀತಿ, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ ಕುಟುಂಬ) ಕಾರ್ಡ್ ಹೊಂದಿರುವವರಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ಒದಗಿಸಲು ವರ್ಷಕ್ಕೆ ಸರಾಸರಿ 30,000 ಕೋಟಿ ಬೇಕಾಗಬಹುದು. ಏಕೆಂದರೆ ರಾಜ್ಯಾದ್ಯಂತ 1.28 ಕೋಟಿ ಮಹಿಳೆಯರು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದಾರೆ. ಇವರೆಲ್ಲರಿಗೂ ತಿಂಗಳಿಗೆ 2 ಸಾವಿರ ನೀಡಲು 30 ಸಾವಿರ ಕೋಟಿ ಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ವಾರ್ಷಿಕ 3 ಸಾವಿರ ಕೋಟಿ ಬೇಕಾಗುತ್ತದೆ ಎಂದು ಊಹಿಸಲಾಗಿದೆ. ಇದಲ್ಲದೇ, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ಮತ್ತು 10 ಕೆಜಿ ಉಚಿತ ಅಕ್ಕಿ ನೀಡಲು ವರ್ಷಕ್ಕೆ 15,000 ಕೋಟಿಯಿಂದ 17,000 ಕೋಟಿಯವರೆಗೆ ಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಒಟ್ಟಾರೆಯಾಗಿ ಕಾಂಗ್ರೆಸ್ ನೀಡಿರುವ ಈ 5 ಪ್ರಮುಖ ಭರವಸೆಗಳನ್ನು ಈಡೇರಿಸಲು ವರ್ಷಕ್ಕೆ ಅಂದಾಜು 75 ಸಾವಿರ ಕೋಟಿ ರೂಪಾಯಿಗಳು ಬೇಕಾಗಬಹುದು. 2023-24ನೇ ಸಾಲಿನ ಬಜೆಟ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ್ ಅವರು 3 ಸಾವಿರ ಕೋಟಿಗೆ ಮಂಡಿಸಿದ್ದರು. 2013 ರಿಂದ 2018 ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ 1 ಲಕ್ಷದ 28 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದರು. ಕಳೆದ ಬಿಜೆಪಿ ಸರ್ಕಾರದಲ್ಲಿ ಆ ಸಾಲ 3 ಸಾವಿರ ಕೋಟಿ ಮೀರಿತ್ತು.

ಇದರಿಂದಾಗಿ ಕರ್ನಾಟಕ ಸರ್ಕಾರದ ಸಾಲ ಹೆಚ್ಚುತ್ತಲೇ ಇದೆ. ಮತ್ತು ಆ ಸಾಲದ ಮೇಲಿನ ಬಡ್ಡಿಯೂ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ಯೋಜನೆಗಳನ್ನು ಈಡೇರಿಸಲು ಸರ್ಕಾರ ಇನ್ನೂ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ? ಆದ್ದರಿಂದ ಕಾಂಗ್ರೆಸ್ ಉಚಿತ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸಾದ್ಯವೇ? ಎಂಬ ಪ್ರಶ್ನೆಯನ್ನು ಅರ್ಥಶಾಸ್ತ್ರಜ್ಞರು ಮುಂದಿಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ನೀಡಿದ ಭರವಸೆಗಳು ಈಡೇರುತ್ತದೆಯೇ? ಅದಕ್ಕಾಗಿ ಕಾಂಗ್ರೆಸ್ ನಾಯಕರು ಯಾವ ಕ್ರಮಗಳನ್ನು ತೆಗೆದುಕೊಳಬಹುದು? ಎಂಬುದನ್ನು ಕಾದು ನೋಡಬೇಕಿದೆ.

Related Posts