ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಬಜರಂಗದಳ ಬಿಜೆಪಿಯ ಮುದ್ದಿನ ಕೂಸೆ? » Dynamic Leader
December 13, 2024
ರಾಜಕೀಯ

ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಬಜರಂಗದಳ ಬಿಜೆಪಿಯ ಮುದ್ದಿನ ಕೂಸೆ?

“ಮಣಿಪುರ ಹೊತ್ತಿ ಉರಿಯುತ್ತಿದೆ! ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ! ಪ್ರಧಾನಿ ಮತ್ತು ಗೃಹ ಸಚಿವರು ಕರ್ನಾಟಕದಲ್ಲಿ ರೋಡ್ ಷೋ ಮಾಡುತ್ತ ಬ್ಯುಸಿಯಾಗಿದ್ದಾರೆ”! ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

“ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಗುಜರಾತ್ ಗಲಭೆ: ಬಿಜೆಪಿ ಸರ್ಕಾರ, ತ್ರಿಪುರ ಗಲಭೆ: ಬಿಜೆಪಿ ಸರ್ಕಾರ, ಬೆಂಗಳೂರು ಗಲಭೆ: ಬಿಜೆಪಿ ಸರ್ಕಾರ, ದೆಹಲಿ ಗಲಭೆ: ಬಿಜೆಪಿ ಸರ್ಕಾರ, ಈಗ ಮಣಿಪುರ ಗಲಭೆ: ಬಿಜೆಪಿ ಸರ್ಕಾರ. ಬಿಜೆಪಿ ಆಡಳಿತದಲ್ಲಿ ಜನರಿಗೆ ತಮ್ಮ ಸ್ವಂತ ಮನೆಯೊಳಗೇ ರಕ್ಷಣೆ ಇಲ್ಲವಾದಾಗ ದೇಶದ ರಕ್ಷಣೆ ಸಾಧ್ಯವೇ?

ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?

ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ; ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ; ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ; ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ.

ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ, PFI ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಉರಿದು ಬೀಳುವ ಬಿಜೆಪಿ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ನರೇಂದ್ರ ಮೋದಿ ಅವರೇ ಹಾಗೂ ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ನಂತರ ಮಾತಾಡಲಿ.

ಬಜರಂಗದಳ ಬಿಜೆಪಿಯ ಅಂಗಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಕರ್ನಾಟಕ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ನೀಡಿಲ್ಲವೇಕೆ? ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ?

ಬಜರಂಗದಳ ಅತ್ಯತ್ತಮ ಸಂಘಟನೆಯಾಗಿದ್ದರೆ ಅಮಿತ್ ಶಾ ಅವರು ತಮ್ಮ ಮಗನನ್ನು BCCI ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ. ಬೊಮ್ಮಾಯ್ ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟು, ಕೇಸಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ.

ಬಜರಂಗದಳ ಬಗ್ಗೆ ಭಯಂಕರವಾಗಿ ಮಾತನಾಡುವ ಕರ್ನಾಟಕ ಬಿಜೆಪಿ ನಾಯಕರು ಉತ್ತರಿಸಲಿ. ಸಿ.ಟಿ.ರವಿ ಮಕ್ಕಳು, ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್.ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಶ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯ್ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ”? ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ಬಿಜೆಪಿಯ ವಿರುದ್ಧ ಕೆಂಡ ಕಾರಿದೆ.

Related Posts