ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನೆಗೆ ಸಿದ್ದರಾಮಯ್ಯ ತಕ್ಕ ಉತ್ತರ! » Dynamic Leader
December 14, 2024
ರಾಜಕೀಯ

ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನೆಗೆ ಸಿದ್ದರಾಮಯ್ಯ ತಕ್ಕ ಉತ್ತರ!

ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಕ್ಕ ಉತ್ತರವನ್ನು ನೀಡಿದ್ದಾರೆ.

“ಗೃಹ ಸಚಿವ ಅಮಿತ್ ಶಾ ಅವರೇ, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡಲು ಮುಸ್ಲಿಮರ ಮೀಸಲಾತಿಯನ್ನು ಇಲ್ಲವೆ ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗ-ಲಿಂಗಾಯತರ ಮೀಸಲಾತಿ ಕಡಿತಗೊಳಿಸಬೇಕಾಗಿಲ್ಲ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಈ ವಿವಾದವನ್ನು ಸುಲಭದಲ್ಲಿ ಬಗೆಹರಿಸಬಹುದು. ಬಿಜೆಪಿಗೆ ಒಕ್ಕಲಿಗರು-ಲಿಂಗಾಯತರ ಮೀಸಲಾತಿ ಹೆಚ್ಚಿಸುವ ಸದುದ್ದೇಶ ಇರಲಿಲ್ಲ. ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡುವ ದುರುದ್ದೇಶವಷ್ಟೇ ಇತ್ತು. ಇದನ್ನು ಅರ್ಥಮಾಡಿಕೊಂಡೇ ಸುಪ್ರೀಂ ಕೋರ್ಟ್ ಸರ್ಕಾರದ ಮೀಸಲಾತಿ ನೀತಿಗೆ ತಡೆಯಾಜ್ಞೆ ನೀಡಿರುವುದು.

ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಲ್ಲಿಯೇ ಜಾತಿ-ಜಾತಿ ಮತ್ತು ಧರ್ಮ-ಧರ್ಮದ ನಡುವೆ ಜಗಳ ಹಚ್ಚುವ ದುಷ್ಟ ಆಲೋಚನೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ಕರ್ನಾಟಕದ ಜನತೆ ದಡ್ಡರಲ್ಲ. ಒಕ್ಕಲಿಗರು ಮತ್ತು ಲಿಂಗಾಯತರು ಸೇರಿದಂತೆ ಈ ರಾಜ್ಯದ ಮಹಾಜನತೆ ‘ಕಿತ್ತು ತಿನ್ನುವ ದುಷ್ಟರಲ್ಲ’, ‘ಹಂಚಿ ತಿನ್ನುವ ಔದಾರ್ಯ ಸಜ್ಜನರು’ ಎನ್ನುವುದನ್ನು ಅಮಿತ್ ಶಾ ಅವರಿಗೆ ವಿನಮ್ರವಾಗಿ ತಿಳಿಸಬಯಸುತ್ತೇನೆ.

ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಪಕ್ಷದ ವಿರೋಧ ಇಲ್ಲ. ನಮ್ಮ ಪಕ್ಷ ಮೀಸಲಾತಿ ಹೆಚ್ಚಳದ ಪರವಾಗಿದೆ. ಬಿಜೆಪಿ ಸರ್ಕಾರ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನಷ್ಟೇ ವಿರೋಧಿಸುತ್ತಿದ್ದೇವೆ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದೊಂದೇ ಈಗಿನ ಮೀಸಲಾತಿಯ ಗೊಂದಲ-ವಿವಾದವನ್ನು ಪರಿಹರಿಸಲು ಇರುವ ಸರಿಯಾದ ಮಾರ್ಗ. ಮೀಸಲಾತಿಗೆ ಈಗ ವಿಧಿಸಲಾಗಿರುವ ಶೇಕಡಾ 50ರ ಮಿತಿ ಸಂವಿಧಾನದಲ್ಲಿ ಹೇರಲಾದ ಮಿತಿ ಅಲ್ಲ, ಅದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗ.

ಈಗಾಗಲೇ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿ ಶೇಕಡಾ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಎಲ್ಲ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಗುವಂತೆ ಮೀಸಲಾತಿಯನ್ನು ಪರಿಷ್ಕರಿಸಿ ಜಾರಿಗೆ ತರಬೇಕು ಮತ್ತು ಈ ಮೀಸಲಾತಿಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ ಗೆ ಸೇರಿಸಬೇಕು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 50ರಿಂದ ಶೇಕಡಾ 75ರ ವರೆಗೆ ಹೆಚ್ಚಿಸಿ ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುತ್ತೇವೆ. ನಮ್ಮಲ್ಲಿ ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮನೆ ಮನೆಗೆ ತೆರಳಿ ವೈಜ್ಞಾನಿಕವಾಗಿ ಗಣತಿ ಮಾಡಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಸಿದ್ಧ ಇದೆ. ಅದರ ಆಧಾರದಲ್ಲಿ ಮೀಸಲಾತಿ ರೂಪಿಸಿದರೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಕೊಳ್ಳಬಹುದು ಎಂಬ ಭರವಸೆ ನನಗಿದೆ” ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.

1994ರಲ್ಲಿ ಎಂ.ವೀರಪ್ಪ ಮೊಯಿಲಿ ಸರ್ಕಾರ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 73ಕ್ಕೆ ಹೆಚ್ಚಿಸಿ ಆದೇಶ ಮಾಡಿತ್ತು. ಅದಿನ್ನು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಅಲ್ಲಿಯೂ ರಾಜ್ಯ ಸರ್ಕಾರ ಜಾತಿಗಣತಿಯ ವರದಿಯನ್ನು ಮುಂದಿಟ್ಟು ಮೀಸಲಾತಿ ಹೆಚ್ಚಳಕ್ಕೆ ಅನುಮತಿ ಕೋರಿದರೆ ನ್ಯಾಯಾಲಯ ಖಂಡಿತ ಒಪ್ಪಿಗೆ ನೀಡಬಹುದು. ಸಾಮಾಜಿಕ ಅನ್ಯಾಯವನ್ನೇ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡು ಬಂದ ಬಿಜೆಪಿ ಪಕ್ಷಕ್ಕಾಗಲಿ, ಅದರ ಅಧ್ಯಕ್ಷರಿಗಾಗಲಿ ಸಾಮಾಜಿಕ ನ್ಯಾಯ ಅರ್ಥವಾಗಲಾರದು. ನಮ್ಮದು ಕೋಮುವಾದವನ್ನು ಉಸಿರಾಡುವ ಗುಜರಾತ್ ಅಲ್ಲ, ಬಸವವಾದವನ್ನು ಮೈಗೂಡಿಸಿಕೊಂಡಿರುವ ಕರ್ನಾಟಕ ಎನ್ನುವುದನ್ನು ಅಮಿತ್ ಶಾ ಅವರಿಗೆ ನೆನಪಿಸಬಯಸುತ್ತೇನೆ.

ಸಾಧನೆಯ ಬಲದಿಂದಾಗಲಿ, ಸವಕಲುಗೊಂಡಿರುವ ಕೋಮುವಾದದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಈ ಅಡ್ಡಕಸುಬಿ ಮೀಸಲಾತಿ ನೀತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಘೋಷಿಸಿತ್ತು. ಈ ಮೀಸಲಾತಿಯನ್ನು ಒಕ್ಕಲಿಗ ಇಲ್ಲವೇ ಲಿಂಗಾಯತರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಮುಸ್ಲಿಮ್ ಮತ್ತು ಒಕ್ಕಲಿಗ-ಲಿಂಗಾಯತರ ನಡುವೆ ದ್ವೇಷ ಹುಟ್ಟಿಸುವುದೇ ಆಗಿದೆ.

ಗೃಹ ಸಚಿವ ಅಮಿತ್ ಶಾ ಅವರ ಪ್ರಶ್ನೆಯಲ್ಲಿಯೇ ಬಿಜೆಪಿಯ ದುಷ್ಟ ಆಲೋಚನೆ ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿರುವ ಮುಸ್ಲಿಮರು ಮೀಸಲಾತಿ ರದ್ದತಿಯಿಂದ ಅಧೀರರಾಗಲಿಲ್ಲ, ಪ್ರಚೋದನೆಗೂ ಒಳಗಾಗಲಿಲ್ಲ. ಅದೇ ರೀತಿ ಇದು ಕನ್ನಡಿಯೊಳಗಿನ ಗಂಟು ಎನ್ನುವುದನ್ನು ಅರ್ಥಮಾಡಿಕೊಂಡಿರುವ ಜಾಗೃತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕೂಡಾ ಹೊಸ ಮೀಸಲಾತಿ ಘೋಷಣೆಯಿಂದ ಸಂಭ್ರಮಗೊಳ್ಳಲಿಲ್ಲ. ಇದು ನಮ್ಮ ಕರ್ನಾಟಕ.

ಈಗ ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಹೊಸ ಮೀಸಲಾತಿಯನ್ನು ಜಾರಿಗೆ ತರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಮೂಲಕ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಕೇಂದ್ರ ಸರ್ಕಾರದ ಗೃಹಸಚಿವರು ಚುನಾವಣಾ ಭಾಷಣದಲ್ಲಿ ಅದರ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ಗೃಹಸಚಿವ ಅಮಿತ್ ಶಹಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ, ಬಡಿಯುವ, ಮುರಿಯುವ ಸುಡುವ ‘ಗುಜರಾತ್ ಮಾದರಿ’ ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ಪ್ರೀತಿಸುವ, ಪೊರೆಯುವ ಮತ್ತು ಕಟ್ಟುವ ‘ಕರ್ನಾಟಕ ಮಾದರಿ’ಯೇ ನಡೆಯುವುದು. ಅಮಿತ್ ಶಾ ಅವರ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

Related Posts