ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜೀವನ್ಮರಣ ಪರಿಸ್ಥಿತಿಯೇ?
ಬೆಂಗಳೂರು: ಪುದುಚೇರಿ ಒಳಗೊಂಡಂತೆ 6 ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಯಿರುವ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ. ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋತರೆ ಆ ಪಕ್ಷಕ್ಕೆ ದಕ್ಷಿಣ ಭಾರತದ ಬಾಗಿಲು ಸಂಪೂರ್ಣವಾಗಿ ಮುಚ್ಚಲಿದೆ. ಒಂದು ದೇಶವನ್ನು ಆಳುವ ಪಕ್ಷ; ವಿಶ್ವದ ಅತಿ ದೊಡ್ಡ ಸದಸ್ಯತ್ವ ಹೊಂದಿರುವ ಪಕ್ಷ; ದೇಶದ ಒಂದು ದೊಡ್ಡ ಭೂಪ್ರದೇಶದಲ್ಲಿ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದು ಆ ಪಕ್ಷಕ್ಕೆ ಕಹಿ ದುಃಸ್ವಪ್ನವಾಗಿ ಇರುತ್ತದೆ.
ಲಿಂಗಾಯತ ಸೇರಿದಂತೆ ಪ್ರಮುಖ ವೋಟ್ ಬ್ಯಾಂಕ್ ಸಮುದಾಯಗಳು ಬಿಜೆಪಿಯಿಂದ ದೂರ ಸರಿಯುತ್ತಿರುವುದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಪ್ರಮುಖ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದು, ನಂದಿನಿ ಹಾಲಿನ ವಿಚಾರ, ಮುಸ್ಲಿಮರಿಗೆ ಶೇಕಡಾ 4% ಮೀಸಲಾತಿ ರದ್ದು ಮುಂತಾದ ವಿಷಯಗಳು ಬಿಜೆಪಿಗೆ ಚುನಾವಣೆಯ ಸಂದರ್ಭದಲ್ಲಿ ಬಾರಿ ಬಿಕ್ಕಟ್ಟನ್ನು ನೀಡುತ್ತವೆ ಎಂದು ನಿರೀಕ್ಷೆ ಮಾಡುತ್ತಿರುವ ಸಂದರ್ಭದಲ್ಲಿ, ಇವುಗಳನ್ನು ಹತ್ತಿಕ್ಕಲು ಬಿಜೆಪಿಯೂ ಪರ್ಯಾಯ ಚಿಂತನೆಗಳನ್ನು ಮುಂದಿಟ್ಟಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಸರಿ ಒಂದುವೇಳೆ ಚುನಾವಣೆಯಲ್ಲಿ ಸೋತರೆ ಕೆಲವು ಕ್ರಿಯಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ದೆಹಲಿ ಬಿಜೆಪಿ ಮೂಲಗಳು ಹೇಳುತ್ತವೆ. ಒಟ್ಟಾರೆಯಾಗಿ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜೀವನ್ಮರಣ ಪರಿಸ್ಥಿತಿಯೇ?