ಈ ದೇಶವನ್ನು ದಬ್ಬಾಳಿಕೆಯಿಂದ ರಕ್ಷಿಸಲು ಬಯಸುತ್ತಿರುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆಯೇ! ರಾಹುಲ್ ಪರ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ.
ಚೆನ್ನೈ: ಭಾರತವೇ ನಿಮ್ಮ ಮನೆ ಎಂದು ನಟ ಪ್ರಕಾಶ್ ರಾಜ್ ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬೆನ್ನಲ್ಲೇ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ದೆಹಲಿ 10, ತುಘಲಕ್ ಲೇನ್ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22 ರೊಳಗೆ ತೆರವು ಮಾಡುವಂತೆ ನಿನ್ನೆ ಲೋಕಸಭೆ ಸೆಕ್ರೆಟರಿಯೇಟ್ ಅವರಿಗೆ ನೋಟಿಸ್ ಜಾರಿಮಾಡಿತ್ತು. ‘ರಾಹುಲ್ ಅವರಿಗೆ ಕಾಲಾವಕಾಶ ಬೇಕಿದ್ದಲ್ಲಿ ಲೋಕಸಭೆಯ ವಸತಿ ಸಮಿತಿಗೆ ಪತ್ರ ಬರೆದು ಕೇಳಿಕೊಂಡರೆ ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.
ಅದಕ್ಕೆ ಮರುದಿನ ಲೋಕಸಭೆ ಸೆಕ್ರೆಟರಿಯೇಟ್ ಅವರ ನೋಟಿಸ್ ಗೆ ಉತ್ತರವನ್ನು ಕಳುಹಿಸಿಕೊಟ್ಟ ರಾಹುಲ್, “ಜನಾದೇಶದಿಂದ 4 ಬಾರಿ ಲೋಕಸಭಾ ಸಂಸದನಾಗಿ ಆಯ್ಕೆಯಾದ ನಾನು ಈ ಬಂಗಲೆಯಲ್ಲಿ ವಾಸವಾಗಿದ್ದ ಸಂತೋಷದ ನೆನಪುಗಳಿಗೆ ಋಣಿಯಾಗಿದ್ದೇನೆ. ನಾನು ಯಾವುದೇ ಹಕ್ಕುಗಳನ್ನು ಪ್ರತಿಪಾದಿಸದೆ, ನಿಮ್ಮ ಪತ್ರದ ವಿಷಯಗಳಿಗೆ ನಾನು ಖಂಡಿತವಾಗಿಯೂ ಬದ್ಧನಾಗಿರುತ್ತೇನೆ” ಎಂದು ಹೇಳಿದರು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿಗೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ನಟ, ರಾಜಕಾರಣಿ ಪ್ರಕಾಶ್ ರಾಜ್ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, “ಆತ್ಮೀಯ ರಾಹುಲ್ ಗಾಂಧಿ… ಈ ದಬ್ಬಾಳಿಕೆಯಿಂದ ನಮ್ಮ ದೇಶವನ್ನು ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆಯಾಗಿದೆ. ಭಾರತವೇ ನಿಮ್ಮ ಮನೆ. ನಿಮಗೆ ಅತ್ಯಂತ ಸ್ವಾಗತ.. ನಿಮಗೆ ಹೆಚ್ಚಿನ ಶಕ್ತಿ” ಎಂದು ಉಲ್ಲೇಖಿಸಿದ್ದಾರೆ. ಇದು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
Dear @RahulGandhi .. every HOME who want to save our COUNTRY from these tyrants is your HOME .. .. INDIA is your HOME .. you are most WELCOME.. more power to you .. #justasking pic.twitter.com/OCOxnHW93w
— Prakash Raj (@prakashraaj) March 28, 2023