ಅತಿಕ್ರಮಣಶೀಲರಾದ ಖಲಿಸ್ತಾನದ ಬೆಂಬಲಿಗರು; ಏನು ಮಾಡುತ್ತಿದೆ ಕೇಂದ್ರ ರಾಜ್ಯ ಸರ್ಕಾರಗಳು? ಗುಪ್ತಚರ ಇಲಾಖೆ ಸಂಪೂರ್ಣ ವಿಫಲ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್! » Dynamic Leader
December 4, 2024
ದೇಶ

ಅತಿಕ್ರಮಣಶೀಲರಾದ ಖಲಿಸ್ತಾನದ ಬೆಂಬಲಿಗರು; ಏನು ಮಾಡುತ್ತಿದೆ ಕೇಂದ್ರ ರಾಜ್ಯ ಸರ್ಕಾರಗಳು? ಗುಪ್ತಚರ ಇಲಾಖೆ ಸಂಪೂರ್ಣ ವಿಫಲ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್!

ಡಿ.ಸಿ.ಪ್ರಕಾಶ್ ಸಂಪಾದಕರು

ಖಲಿಸ್ತಾನ್ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುತ್ತಿರುವ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖಂಡ ಅಮೃತಪಾಲ್ ಸಿಂಗ್ ಅವರನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪೊಲೀಸರ ಈ ಕ್ರಮದಿಂದ ಅಮೆರಿಕ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ನೆಲೆಸಿರುವ ಖಲಿಸ್ತಾನ್ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಿದ ಖಲಿಸ್ತಾನದ ಬೆಂಬಲಿಗರು, ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಖಲಿಸ್ತಾನದ ಧ್ವಜವನ್ನು ಹಾರಿಸುಲು ಮಾಡಿದ ದಾಂದಲೆಗಳನ್ನು ನಾವು ನೋಡಿದೆವು. ಅದೇ ರೀತಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಉಪ ರಾಯಭಾರಿ ಕಚೇರಿ ಮೇಲೆಯೂ ಖಲಿಸ್ತಾನ್ ಬೆಂಬಲಿಗರು ದಾಳಿ ನಡೆಸಿದ್ದಾರೆ. ಅಮೃತಪಾಲ್ ಸಿಂಗ್ ಅವರನ್ನು ಬೆಂಬಲಿಸಿ ಕೆಲವರು ಆಸ್ಟ್ರೇಲಿಯಾ ಸಂಸತ್ತಿನ ಮುಂದೆಯೂ ಪ್ರತಿಭಟನೆ ನಡೆಸಿದ್ದಾರೆ.

ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ

ಅಮೃತಪಾಲ್ ಸಿಂಗ್ ಅವರನ್ನು ಬಂಧಿಸಲು ಕಳೆದ ವಾರ ಪೊಲೀಸರು ಮುಂದಾದರು. ಆದರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಮೃತಪಾಲ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರಿನಿಂದ ಇಳಿದು ಬೈಕ್ ನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ, ಅಮೃತಪಾಲ್ ಅವರನ್ನು ಪೊಲೀಸರು ಬಂದಿಸಿದ್ದಾರೆ ಎಂದು  ಹೇಳುವ ಅವರ ಬೆಂಬಲಿಗರು, ಅಮೃತಪಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಆಲಿಸಿದ ನ್ಯಾಯಾಧೀಶರು, ‘ಪಂಜಾಬ್ ರಾಜ್ಯದ 80,000 ಪೊಲೀಸರನ್ನು ಧಿಕ್ಕರಿಸಿ ಪರಾರಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು. ಹಾಗಿದ್ದಲ್ಲಿ, ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ’ ಎಂದ ನ್ಯಾಯಾಧೀಶರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನ್ಯಾಯಾಲಯದ ಟೀಕೆ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಆರು ವಿಭಿನ್ನ ನೋಟಗಳಲ್ಲಿ ಅಮೃತಪಾಲ್ ಸಿಂಗ್ ಅವರ ಛಾಯಾಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ 154 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತಪಾಲ್ ಮತ್ತು ಅವರ ಕೆಲವು ಬೆಂಬಲಿಗರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹಾಕಲಾಗಿದೆ. ಅಮೃತಪಾಲ್ ಅವರ ಕೆಲವು ಬಂಧಿತ ಬೆಂಬಲಿಗರನ್ನು ಭದ್ರತಾ ಕಾರಣಗಳಿಗಾಗಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ. ಅಮೃತಪಾಲ್ ಸಿಂಗ್ ಅವರ ತವರು ಗ್ರಾಮ ಜಲ್ಲುಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅಸ್ಸಾಂನ ದಿಬ್ರುಗಢ ಜೈಲ್

ಅಮ್ಜಲಂದರ್ ಪ್ರದೇಶದಲ್ಲಿ ಯಾರೂ ಗಮನಿಸದೆ ನಿಲ್ಲಿಸಿದ್ದ ಇಸುಜು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಿಂದ ಪಿಸ್ತೂಲ್, ಕತ್ತಿ ಮತ್ತು ವಾಕಿಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಖಲಿಸ್ತಾನ್ ಚಳವಳಿ ಆರಂಭಿಸಿ ಹಿಂಸಾಚಾರದಲ್ಲಿ ತೊಡಗಿದ್ದ ಭಿಂದ್ರನ್ ವಾಲೆ ಸೇನೆಯ ಕಾರ್ಯಾಚರಣೆಯಲ್ಲಿ ಹತರಾಗಿದ್ದರು. ಇಂತಹ ಪರಿಸ್ಥಿತಿಯ ಭೀತಿ ಈಗ ಪಂಜಾಬ್ ಜನರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳು ಪಥಸಂಚಲನ ನಡೆಸಿ ಜನರ ಆತಂಕವನ್ನು ದೂರ ಮಾಡಿದೆ.

‘ಅಕಲ್ ತಖ್ತ್’ ಎಂಬ ಸಿಖ್ ಸಂಘಟನೆಯು ಪಂಜಾಬ್‌ನಲ್ಲಿ ಭಯೋತ್ಪಾದಕ ಪರಿಸ್ಥಿತಿಯನ್ನು ಸೃಷ್ಟಿಸಬೇಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೇಳಿಕೊಂಡಿದೆ. ಪಂಜಾಬ್ ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸಲು ಅಕಲ್ ತಖ್ತ್ ಸಂಘಟನೆಯು ಇತರ ಸಿಖ್ ಸಂಘಟನೆಗಳನ್ನು ಆಹ್ವಾನಿಸಿದೆ. ಅದರಂತೆ ಮಾರ್ಚ್ 27 ರಂದು ಸಿಖ್ ಸಂಘಟನೆಗಳ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಫೆಬ್ರವರಿ 23 ರಂದು ಅಮೃತಪಾಲ್ ಸಿಂಗ್ ಅವರ ಬೆಂಬಲಿಗರು ಅಜ್ನಾಲಾ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ ನಂತರ, ಕೇಂದ್ರ ಸರ್ಕಾರವು ಪಂಜಾಬ್‌ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ರಾಷ್ಟ್ರದ ವಿರುದ್ಧ ಯಾವುದೇ ಶಕ್ತಿಗೆ ವರ್ತಿಸಲು ನಾವು ಬಿಡುವುದಿಲ್ಲ ಎಂದು ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ. ಪ್ರತ್ಯೇಕತಾವಾದಿ ಚಟುವಟಿಕೆಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೈಜೋಡಿಸಿವೆ. ಯಾವುದೇ ಹಿಂಸಾಚಾರವಿಲ್ಲದೆ ಶಾಂತಿ ನೆಲೆಸಬೇಕು ಎಂಬುದು ಪಂಜಾಬ್ ಜನತೆಯ ಆಶಯವಾಗಿದೆ.

Related Posts