ಈ ವಾರ ತೆರೆಗೆ ‘ಕಡಲತೀರದ ಭಾರ್ಗವ’  » Dynamic Leader
October 12, 2024
ಸಿನಿಮಾ

ಈ ವಾರ ತೆರೆಗೆ ‘ಕಡಲತೀರದ ಭಾರ್ಗವ’ 

ವರದಿ: ಅರುಣ್ ಜಿ.,

ಉತ್ಸಾಹಿ ಯುವಕರ ತಂಡದಿಂದ ಮೂಡಿಬಂದಿರುವ ‘ಕಡಲತೀರದ ಭಾರ್ಗವ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಈಗ ಚಿತ್ರವು ಇದೇ ಮಾರ್ಚ್ 03ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘ಕಡಲತೀರದ ಭಾರ್ಗವ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ಡಾ.ಶಿವರಾಮ ಕಾರಂತರು. ಕನ್ನಡ ನಾಡಿನಲ್ಲಿ ಅವರು ‘ಕಡಲತೀರದ ಭಾರ್ಗವ’ ಎಂಬ ಬಿರುದಿನಿಂದಲೇ ಅವರು ಪ್ರಸಿದ್ಧರಾದವರು. ಆದರೆ, ಅವರಿಗೂ, ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಅವರ ಜೀವನದ ಕಥೆಯಲ್ಲ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿರುವ ಪನ್ನಗ ಸೋಮಶೇಖರ್.

ಈ ಕುರಿತು ಮಾತನಾಡಿದ ಅವರು, ‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇನೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳಲ್ಲಿ ಬರುವ ಒಂದು ಪವರ್ಫುಲ್ ಪಾತ್ರ. ಇಲ್ಲಿ ನಾಯಕ ಭಾರ್ಗವ, ಪರಶುರಾಮನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಏನೇ ಆದರೂ ಗುರಿ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನಡೆಯುತ್ತಿರುತ್ತಾನೆ. ಹಾಗಾಗಿ, ಚಿತ್ರಕ್ಕೆ ‘ಕಡಲತೀರದ ಭಾರ್ಗವ’ ಎಂದು ಹೆಸರಿಟ್ಟಿದ್ದೇವೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಡಾ.ಶಿವರಾಮ ಕಾರಂತರಿಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅವರಿಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನೂ ಮಾಡಿಲ್ಲ. ಈಗಾಗಲೇ ಚಿತ್ರವನ್ನು ಹಲವರಿಗೆ ತೋರಿಸಿದ್ದೇವೆ. ಚಿತ್ರ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಶೀರ್ಷಿಕೆಗೆ ನ್ಯಾಯ ಸಲ್ಲಿಸಿದ್ದೇನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ’ ಪನ್ನಗ ಸೋಮಶೇಖರ್.

 

‘ಒಬ್ಬ ಮನುಷ್ಯನಲ್ಲಿ ಎಲ್ಲ ತರಹದ ಭಾವನೆಗಳಿರುತ್ತವೆ. ಆ ಎಮೋಷನ್ಗಳನ್ನು ಇಟ್ಟುಕೊಂಡು ಮಾಡಿರುವ ಕಥೆಯೇ ‘ಕಡಲತೀರದ ಭಾರ್ಗವ’’ ಎನ್ನುತ್ತಾರೆ ಚಿತ್ರದ ನಾಯಕರಲ್ಲೊಬ್ಬರಾದ ವರುಣ್ ರಾಜು. ‘ಚಿತ್ರದ ಟ್ರೇಲರ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಲರ್ ನೋಡಿದವರೆಲ್ಲ, ಬಹಳ ಗ್ರಿಪ್ಪಿಂಗ್ ಆಗಿದೆ, ಕಥೆ ಗೊತ್ತಾಗುತ್ತಿಲ್ಲ, ಹೊಸಬರೇ ಸೇರಿ ಈ ಚಿತ್ರ ಮಾಡಿದ್ದು ಎಂದನಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಾಳೆ ಚಿತ್ರ ನೋಡುವ ಪ್ರೇಕ್ಷಕರು ಸಹ ಇದೇ ಅಭಿಪ್ರಾಯಪಟ್ಟರೆ ನಮ್ಮ ಶ್ರಮ ಸಾರ್ಥಕ’ ಎನ್ನುತ್ತಾರೆ ವರುಣ್.

ಈಗಾಗಲೇ ‘ಕಡಲತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್ ದಾಖಲೆಯ ಎರಡೂವರೆ ಲಕ್ಷ ರೂಗಳಿಗೆ ಹರಾಜಿನಲ್ಲಿ ಮಾತಾಟವಾಗಿದೆ. ನಾಯಕ ವರುಣ್ ರಾಜು ಅವರ ಸಂಬಂಧಿಯೂ ಆದ ಮೋಹನ್ ರಾಜು ದುಡ್ಡು ಕೊಟ್ಟು ಮೊದಲ ಟಿಕೆಟ್ ಪಡೆದಿದ್ದಾರೆ. ‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್.ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ.ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.

Related Posts