ಲಾಂಗ್ ಡ್ರೈವ್ ಎನ್ನುವ ಲವ್ಲಿ ಸಿನಿಮಾ! » Dynamic Leader
January 22, 2025
ಸಿನಿಮಾ

ಲಾಂಗ್ ಡ್ರೈವ್ ಎನ್ನುವ ಲವ್ಲಿ ಸಿನಿಮಾ!

ಅರುಣ್ ಜಿ.,

ಈ ಜಗತ್ತಿರುವುದೇ ಹೀಗೆ ಇಲ್ಲಿ ಯಾರನ್ನೂ ಒಳ್ಳೆಯವರು ಅಥವಾ ಕೆಟ್ಟವರು ಅಂಥಾ ಒಂದೇ ಏಟಿಗೆ ಏಳಿಬಿಡಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಬರಿಯ ಒಳ್ಳೆಯತನ, ಪ್ರಾಮಾಣಿಕತೆ ವ್ಯಕ್ತಿಯೊಬ್ಬನನ್ನು ನೋಡುಗರ ದೃಷ್ಟಿಯಲ್ಲಿ ಬೇರೆಯದ್ದೇ ರೀತಿಯಲ್ಲಿ ಚಿತ್ರಿಸಿಬಿಡುತ್ತದೆ. ಹಾಗೆಯೇ, ವ್ಯಸನಕ್ಕೆ ಬಿದ್ದ ವ್ಯಕ್ತಿ ಎಂಥ ಹೀನ ಕೆಲಸ ಮಾಡಲು ಕೂಡಾ ಮುಂದಾಗುತ್ತಾನೆ. ಯಾವತ್ತಾದರೊಂದು ದಿನ ಮುಖವಾಡ ಕಳಚಿಬೀಳುತ್ತದೆ ಅನ್ನೋ ಭಯದಲ್ಲಿ ಬದುಕುವುದಕ್ಕಿಂತಾ ಗೌರವಯುತವಾಗಿ ಬಾಳ್ವೆ ನಡೆಸೋದು ಉತ್ತಮ…

ʻಲಾಂಗ್ ಡ್ರೈವ್ʼ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿದೆ. ಈ ಚಿತ್ರದಲ್ಲೂ ಇಂಥ ಅನೇಕ ವಿಚಾರಗಳಿವೆ. ಪ್ರೀತಿಗೆ ಬಿದ್ದ ಜೋಡಿ ಲಾಂಗ್ ಡ್ರೈವ್ ಹೊರಟಿರುತ್ತದೆ. ಅಲ್ಲಿ ಎದುರಾಗುವ ಘಟನೆಗಳು ಹುಡುಗನ ಬಗ್ಗೆ ಹುಡುಗಿಯ ಮನಸ್ಸಿನಲ್ಲಿ ಕೀಳು ಭಾವನೆ ಮೂಡಿಸುತ್ತದೆ. ಹಾಗೆಂದು ಹುಡುಗ ಅವಳ ಹತ್ತಿರ ಅನುಚಿತವಾಗಿ ವರ್ತಿಸಿರುವುದಿಲ್ಲ. ʻತನ್ನನ್ನು ಈತ ರಕ್ಷಿಸಲಾರʼ ಎನ್ನುವಂತಾ ಮನಸ್ಥಿತಿಗೆ ದೂಡುತ್ತದಷ್ಟೇ. ಇದೇ ಕಾರಣಕ್ಕೆ ಆಕೆ `ಒಂದು ಹುಡುಗೀನ ಇಷ್ಟ ಪಡೋದು ಗಂಡಸ್ತನ ಅಲ್ಲ. ಅವಳನ್ನು ಮದುವೆಯಾಗಿ ಮಗು ಕೊಡೋದು ಗಂಡಸ್ತನ ಅಲ್ಲ. ಇಷ್ಟ ಪಟ್ಟೋಳು ಒಂದು ಹುಡುಗನ ಜೊತೆ ಬರ್ತಾಳೆ ಅಂದ್ರೆ, ಅವನ ಮೇಲಿಟ್ಟಿರೋ ನಂಬಿಕೆಯಿಂದ….’ ಅಂತಾ ಕಮೆಂಟು ಮಾಡುತ್ತಾಳೆ. ಕಣ್ಣೀರಿಡುತ್ತಾ ಹೊರಟುಬಿಡುತ್ತಾಳೆ. ಅಲ್ಲಿ ನಡೆದ ಆ ಘಟನೆ ಯಾವುದು? ಅದಕ್ಕೆ ಯಾರು ಕಾರಣ? ಹುಡುಗಿಯ ಮುಂದೆ ತನ್ನ ಇಮೇಜು ಹಾಳು ಮಾಡಿಕೊಂಡ ಹುಡುಗ ಮುಂದೆ ಏನೆಲ್ಲಾ ಮಾಡುತ್ತಾನೆ…? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡ ಕಥೆ ಲಾಂಗ್ ಡ್ರೈವ್ನಲ್ಲಿದೆ.

ಸಾಮಾನ್ಯಕ್ಕೆ ಅನ್ಯಾಯಕ್ಕೊಳಗಾದವರು ಸೇಡು ತೀರಿಸಿಕೊಳ್ಳೋದು, ದುಷ್ಟನನ್ನು ಶಿಕ್ಷಿಸಿ ಹೀರೋ ಆಗೋದು ಬಹುತೇಕ ಎಲ್ಲ ಸಿನಿಮಾಗಳಲ್ಲೂ ಇರುತ್ತವೆ. ಅದನ್ನು ಮೀರಿ ಬೇರೊಂದು ಪ್ರಯತ್ನ ಈ ಚಿತ್ರದಲ್ಲಾಗಿದೆ. ಅದೆಷ್ಟು ಹೊಸತನದಿಂದ ಕೂಡಿದೆಯೆಂದರೆ ಈ ಚಿತ್ರದಲ್ಲಿ ಹೀರೋ ಯಾರು? ವಿಲನ್ ಯಾರು ಎನ್ನುವ ಗೊಂದಲ ಸೃಷ್ಟಿಸುವ ಮಟ್ಟಿಗೆ! ಅದೇನೇ ಇರಲಿ, ತಪ್ಪು ಮಾಡಿದವನಿಗೆ ಪರಿವರ್ತನೆಗೊಳ್ಳಲು ಅವಕಾಶ ಕೊಡಬೇಕು ಅನ್ನೋದನ್ನು ಈ ಸಿನಿಮಾದ ಕಂಟೆಂಟು ಪ್ರತಿಪಾದಿಸಿದೆ. ವಿಕಾಸ್ ವಸಿಷ್ಟ ಸಂಗೀತ ನೀಡಿರುವ ಮಾಯಾವಿಯೇ ಹಾಡು ಅದ್ಭುತವಾಗಿದೆ. ಜೀವನ್ ಚೆಂದಚೆಂದ ಪದಗಳನ್ನು ಪೋಣಿಸಿದ್ದಾರೆ. ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಸಿಕ್ಕಿರುವ ಸೀಮಿತ ಸೌಲಭ್ಯದಲ್ಲಿ ಅಚ್ಚುಕಟ್ಟಾದ ಕೆಲಸ ಮಾಡಿ ತೋರಿಸಿದ್ದಾರೆ. 

ಅರ್ಜುನ್ ಯೋಗಿ, ಸುಪ್ರಿತಾ ಸತ್ಯನಾರಾಯಣ್ ನಟನೆ ಇಷ್ಟವಾಗುತ್ತದೆ. ತೇಜಸ್ವಿನಿ ಶೇಖರ್ ಎಂಟ್ರಿ ಕೊಟ್ಟಮೇಲೆ ಚಿತ್ರಕತೆಯ ಲಯ ಪಡೆಯುತ್ತದೆ. ಅಷ್ಟು ಸಹಜವಾಗಿ ಈಕೆ ಅಭಿನಯಿಸಿದ್ದಾರೆ. ಲಾಂಗ್ ಡ್ರೈವ್ ನಲ್ಲಿ ಹೆಚ್ಚು ಸ್ಕೋರ್ ಮಾಡುವುದು ವಿಲನ್ ನಂತೆ ಎಂಟ್ರಿ ಕೊಟ್ಟು ಹೀರೋ ಲೆವೆಲ್ಲು ತಲುಪುವ ಶಬರಿ ಮಂಜು. ಸ್ವತಃ ನಿರ್ಮಾಪಕರೂ ಆಗಿರುವ ಶಬರಿ ಮಂಜು ಕನ್ನಡದಲ್ಲಿ ಉತ್ತಮ ಪೋಷಕ ಕಲಾವಿದನಾಗಿ ನಿಲ್ಲೋದು ನಿಜ. ಜಿಮ್ ಕೀರ್ತೀ ಕಡಿಮೆ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ನೆನಪಿನಲ್ಲುಳಿಯುವ ಪಾತ್ರ ಮಾಡಿದ್ದಾರೆ. ಈತ್ತೀಚೆಗೆ ಬರುತ್ತಿರುವ ಉತ್ತಮ ಹಾಸ್ಯ ಕಲಾವಿದರ ಲಿಸ್ಟಿಗೆ ಜಿಮ್ ಕೀರ್ತಿ ಕೂಡಾ ಸೇರಿಕೊಂಡಿದ್ದಾರೆ. ಹಾಗಂತಾ ಕೀರ್ತಿ ಬರೀ ಕಾಮಿಡಿ ಪಾತ್ರಕ್ಕಷ್ಟೇ ಸೂಟ್ ಆಗುತ್ತಾರಂತೇನೂ ಇಲ್ಲ. ಯಾವುದೇ ಪಾತ್ರ ಕೊಟ್ಟರೂ ಅದನ್ನು ದಕ್ಕಿಸಿಕೊಳ್ಳುವ ಶಕ್ತಿ ಇವರಲ್ಲಿದೆ. ಬಲ ರಾಜ್ ವಾಡಿ ಅವರನ್ನು ನಿರ್ದೇಶಕರು ಇನ್ನೂ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಿತ್ತು. ನಿರ್ದೇಶಕ ಶ್ರೀರಾಜ್ ಈ ಹಿಂದೆ ರವಿ ಶ್ರೀವತ್ಸ ಗರಡಿಯಲ್ಲಿ ಬೆಳೆದವರು. ʻಲಾಂಗ್ ಡ್ರೈವ್ʼ ನೋಡಿದರೆ ಶ್ರೀರಾಜ್ ಶ್ರೀವತ್ಸರ ಯಾವ ಛಾಯೆಯನ್ನು ಅನುಕರಿಸಿದಂತೆ ಕಾಣಿಸಿಲ್ಲ. ಬದಲಿಗೆ ತಮ್ಮದೇ ಹೊಸ ಶೈಲಿಯನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಲವ್ ಕಂ ಥ್ರಿಲ್ಲರ್ ಜಾನರಿನ ʻಲಾಂಗ್ ಡ್ರೈವ್ʼನಲ್ಲಿ ವಿಪರೀತ ತಿರುವು, ಭಯಾನಕ ದೃಶ್ಯಗಳನ್ನು ತುರುಕಿಲ್ಲ.  ಸಣ್ಣದೊಂದು ಕತೆಯನ್ನು ಎಷ್ಟು ಸರಳವಾಗಿ ಹೇಳಿ ಮುಗಿಸಬೇಕೋ ಅದನ್ನಷ್ಟೇ ಮಾಡಿದ್ದಾರೆ.

ಸಿನಿಮಾ ರೇಟಿಂಗ್: 3.5/5

Related Posts