ಶೃತಿ-ಶರಣ್ ಮನೆ ಮಗಳು ಚಿತ್ರರಂಗಕ್ಕೆ ʻಧರಣಿʼಯ ನಾಯಕಿ ಕೀರ್ತಿ ಕೃಷ್ಣ! » Dynamic Leader
December 13, 2024
ಸಿನಿಮಾ

ಶೃತಿ-ಶರಣ್ ಮನೆ ಮಗಳು ಚಿತ್ರರಂಗಕ್ಕೆ ʻಧರಣಿʼಯ ನಾಯಕಿ ಕೀರ್ತಿ ಕೃಷ್ಣ!

ಅರುಣ್ ಜಿ.,

ಬೆಂಗಳೂರು: ನಟಿ ಶೃತಿ ಅವರ ಮನೆಯ ಮೂರನೇ ತಲೆಮಾರು ಈಗ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದೆ. ಇತ್ತೀಚೆಗೆ ನಟ ಶರಣ್ ಅವರ ಮಗ ಗುರು ಶಿಷ್ಯರು ಚಿತ್ರದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಈಗ ಶರಣ್ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ದೊಡ್ಡಮ್ಮ ಶೃತಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದೆ. ಮಾವ ಶರಣ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಈ ನಡುವೆ ಕೀರ್ತಿ ಕೃಷ್ಣ ಯಾವ ಸಿನಿಮಾದೊಂದಿಗೆ ಚಿತ್ರರಂಗದಲ್ಲಿ ಲಾಂಚ್ ಆಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಚಿತ್ರರಂಗದಲ್ಲಿ ಸಾಕಷ್ಟು ಜನ ಕೀರ್ತಿ ಕೃಷ್ಣ ಅವರನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದರು. ಅಂತಿಮವಾಗಿ ಈಗ ಕೀರ್ತಿ ತಮ್ಮ ಮೊದಲ ಸಿನಿಮಾವನ್ನು ಒಪ್ಪಿದ್ದಾರೆ. ಅದು ಧರಣಿ. ಮನೋಜ್ ನಾಯಕನಾಗಿ ನಟಿಸುತ್ತಿರುವ ʻಧರಣಿʼ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಯೊಂದು ಈ ಚಿತ್ರದಲ್ಲಿದೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಈಗ ಕೀರ್ತಿ ಆಯ್ಕೆಯಾಗುವ ಮೂಲಕ ʻಧರಣಿʼಯ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿದೆ.

ಸರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶೃತಿ  ಅಭಿನಯದ ʻಶ್ರೀ ನಾಗ ಶಕ್ತಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಮುಖಕ್ಕೆ ಬಣ್ಣ ಹಚ್ಚಿದ್ದವರು ಕೀರ್ತಿ. ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದಿದ್ದರು. ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಕೀರ್ತಿ ಈಗ ಪೂರ್ಣ ಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕಥೆ ಸಿಕ್ಕರೆ ಮಾತ್ರ ಒಪ್ಪಬೇಕು ಅಂತಾ ಕಾದಿದ್ದ ಕೀರ್ತಿ ಮತ್ತು ಅವರ ಕುಟುಂಬದವರಿಗೆ ʻಧರಣಿʼಯ ಕತೆ ಅಪಾರವಾಗಿ ಇಷ್ಟವಾಗಿದ್ದರಿಂದ ಈ ಚಿತ್ರದ ಮೂಲಕ ನಾಯಕಿಯಾಗಲು ಒಪ್ಪಿಗೆ ನೀಡಿದ್ದಾರೆ.

ಶೃತಿ ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ತಂದೆ ಕೃಷ್ಣ, ತಾಯಂದಿರಾದ ರಾಧ-ರುಕ್ಮಿಣಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಕೃಷ್ಣ ಅವರ ತಾಯಿ ಕೂಡಾ ನಟಿಯಾಗಿದ್ದವರು. ನಂತರ ಶೃತಿ, ಶರಣ್ ಕೂಡಾ ಬಣ್ಣದ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರು. ಈಗ ಮೂರನೇ ತಲೆಮಾರಿನ ಕೀರ್ತಿ ಕೃಷ್ಣ ಕೂಡಾ ಭರವಸೆ ಮೂಡಿಸಿದ್ದಾರೆ. 

ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ನಿರ್ದೇಶನದ ʻಧರಣಿʼ ಚಿತ್ರವನ್ನು ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ, ಶ್ರೀನಿಧಿ ಡಿ.ಎಸ್.ಸಂಭಾಷಣೆ ಜೊತೆಗೆ ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಸಾಹಿತ್ಯ, ಟೈಗರ್ ಶಿವು ಸಾಹಸ ಸಂಯೋಜನೆ ಇದೆ.

Related Posts