ಮತ್ತೆ ಮುನ್ನಲೆಗೆ ಬಂದ ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಮಂಡಳಿಯ ಕೂಗು!   » Dynamic Leader
October 4, 2024
ಬೆಂಗಳೂರು

ಮತ್ತೆ ಮುನ್ನಲೆಗೆ ಬಂದ ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಮಂಡಳಿಯ ಕೂಗು!  

ಬೆಂಗಳೂರು: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯನ್ನು (ಸಿಡಿಸಿ) ರದ್ದುಗೊಳಿಸಿ, ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಮಂಡಳಿ ಅಥವಾ ಅಭಿವೃದ್ಧಿ ನಿಗಮವನ್ನು ಮತ್ತು 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕವಾದ ಮೀಸಲಾತಿಯನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುವಂತೆ ಜನಶಕ್ತಿ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.

ಕರ್ನಾಟಕದಲ್ಲಿ ಕ್ರೈಸ್ತರ ಜನಸಂಖ್ಯೆ ಸುಮಾರು ಶೇ.4% ರಷ್ಟಿದೆ. ಸಮುದಾಯದ ಅಭಿವೃದ್ಧಿಗಾಗಿ 2010ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಸಮಿತಿ ರಚಿಸಿ, ರೂ.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರು. ನಂತರ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ, 2013-14ರಲ್ಲಿ ರೂ.75 ಕೋಟಿ, 2014-15ರಲ್ಲಿ ರೂ.100 ಕೋಟಿ, 2015-16ರಲ್ಲಿ 125 ಕೋಟಿ, 2016-17ರಲ್ಲಿ 175 ಕೋಟಿ ರೂಪಾಯಿಗಳನ್ನು ಅನುದಾನವಾಗಿ ಬಿಡುಗಡೆ ಮಾಡಿತು.

ಸದರಿ ಅನುದಾನದಿಂದ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳ ದುರಸ್ಥಿ ಹಾಗೂ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣಕ್ಕೆ ಸಹಾಯಧನ, ಅನಾಥಾಶ್ರಮಗಳು, ವೃದ್ಧಾಪ್ಯ ಆಶ್ರಮಗಳು, ವಿಕಲ ಚೇತನಾ ಹಾಗೂ ನಿರಾಶ್ರಿತ ಆಶ್ರಮಗಳ ನಡೆಸುವಿಕೆಗೆ ಸಹಾಯಧನ, ಹೊರ ದೇಶಗಳಲ್ಲಿ ಸ್ನಾತಕೋತ್ತರ ಪದವಿಗಳಿಗೆ ಹಾಗೂ ಹೆಚ್ಚಿನ ವಿದ್ಯಾಬ್ಯಾಸ ಶಿಕ್ಷಣಕ್ಕೆ ಸಹಾಯಧನ ಇತ್ಯಾದಿಗಳಿಗೆ ಈ ಅನುದಾನವು ವಿನಿಯೋಗಿಸಲಾಗುತ್ತಿತ್ತು.

2018ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ರವರು ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪಿಸಿ ರೂ.200 ಕೋಟಿಯನ್ನು ಘೋಷಣೆ ಮಾಡಿ, ರೂ.75 ಕೋಟಿಯನ್ನು ಮೀಸಲಿಟ್ಟರು. ನಂತರ ಬಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ನಿಗಮದ ಘೋಷಣೆಯನ್ನು ರದ್ಧುಗೊಳಿಸಿ, ‘ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’ ಯನ್ನು ರಚಿಸಿ, ರೂ.200 ಕೋಟಿಯನ್ನು ಅನುದಾನವಾಗಿ ನೀಡಿತು, ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ವತಿಯಿಂದ ದಿನಾಂಕ: 06.11.2019 ರಂದು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ದಕ್ಷಿಣ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯ್ಲಸ್ ಡಿಸೋಜ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿತು. ಇದರಿಂದ ಕ್ರೈಸ್ತರ ಬಹುದಿನಗಳ ಬೇಡಿಕೆಯಾದ ಕ್ರೈಸ್ತರ ಅಭಿವೃದ್ಧಿ ನಿಗಮಕ್ಕೆ ಮಣ್ಣೆರಚಿದಂತೆ ಆಯಿತು.

ರಾಜ್ಯದಲ್ಲಿ ಸುಮಾರು ಶೇ.4% ರಷ್ಟಿರುವ ಕ್ರೈಸ್ತ ಜನಾಂಗಕ್ಕೆ ಅಲ್ಪಸಂಖ್ಯಾತರ ಇಲಾಖೆಯಲ್ಲಿ ವಿವಿದ ಸೌಲಭ್ಯವನ್ನು ಪಡೆಯಲು ಕೇವಲ ಶೇ.10 ರಷ್ಟು ಅವಕಾಶವನ್ನು ನೀಡಿ, ಸರ್ಕಾರ ಸಮಾಜದ ಮೇಲೆ ಮಲತಾಯಿ ದೋರಣೆ ಮಾಡುತ್ತಿದೆ.

ರಾಜ್ಯ ಸರ್ಕಾರದ ವಿವಿದ ಇಲಾಖೆಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳ ಕಟ್ಟಡಗಳನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳೂತ್ತವೆ. ಆದರೆ, ಕ್ರೈಸ್ತ ಸಂಸ್ಥೆಗಳ ಕೆಲಸ ಕಾರ್ಯಗಳಿಗೆ ಮಾತ್ರ ಅಧಿಕರಿಗಳು ಸ್ಪಂದಿಸುವುದಿಲ್ಲ. ಇದರಿಂದ ಕ್ರೈಸ್ತರ ಕೆಲಸ ಕಾರ್ಯಗಳು ಇಲಾಖೆಯ ಮಟ್ಟದಲ್ಲಿ ಸುಗುಮವಾಗಿ ನಡೆಯುವುದ್ತಿಲ್ಲ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ಅಧಿಕಾರಿಗಳ ಮನಸ್ಥಿತಿ ಇದೇ ಆಗಿರುತ್ತದೆ.

3ಬಿ ವರ್ಗದಲ್ಲಿ ಕ್ರೈಸ್ತ ಸಮುದಾಯ ಬರುವುದರಿಂದ ಬಲಿಷ್ಠ ಸಮುದಾಯಗಳ ಜೊತೆಗೆ ಕ್ರೈಸ್ತ ಮಕ್ಕಳು ಸ್ಪರ್ದಿಸಲಾಗದೆ ಸರ್ಕಾರದ ಪ್ರಮುಖ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿಲ್ಲ. ಇದರಿಂದ ಸಮುದಾಯದ ಪ್ರಗತಿಗೂ ಹಿನ್ನಡೆಯಾಗುತ್ತಿದೆ. ಆದ್ದರಿಂದ 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದೆ.

ರಾಜ್ಯದಲ್ಲಿ ಬೇರೆ ಬೇರೆ ಸಮುದಾಯದವರಿಗೆ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ರಚಿಸಿಕೊಟ್ಟಿದೆ. ಕ್ರೈಸ್ತ ಸಮುದಾಯದವರು ಸಾಕಷ್ಟು ವರ್ಷಗಳಿಂದ ಈ ಬಗ್ಗೆ ಬೆಡಿಕೆ ಇಟ್ಟಿದ್ದರೂ ಇನ್ನೂ ಕ್ರೈಸ್ತ ಅಭಿವೃದ್ಧಿ ಮಂಡಳಿ ರಚಣೆ ಆಗಿಲ್ಲ. ಸರ್ಕಾರ ಕ್ರೈಸ್ತರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳೂತ್ತಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ರೈಸ್ತ ಸಮುದಾಯದ ಮೇಲೆ ಸರಣಿ ದಾಳಿ ನಡೆದಿದೆ. ಆದರೂ ಕ್ರೈಸ್ತರು ಸಹಿಸಿಕೊಂಡರು. ಇದರ ತನಿಖೆಗಾಗಿ ಆಯೋಗ ರಚನೆ ಮಾಡಲಾಯಿತು. ಆದರೆ, ಆಯೋಗದ ತೀರ್ಮಾನ ಏನೆಂಬುದು ಇಲ್ಲಿಯವರೆಗೆ ತಿಳಿದುಕೊಳ್ಳಲು ಆಗುತ್ತಿಲ್ಲ. ರಾಜ್ಯದ – ದೇಶದ ಅಭಿವೃದ್ಧಿಯಲ್ಲಿ ಕ್ರೈಸ್ತರ ಪಾಲೂ ಇದೆ. ಬಡವರ್ಗದ ಕ್ರೈಸ್ತರಿಗೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ.

ಆದ್ದರಿಂದ ಈ ಸರ್ಕಾರ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯನ್ನು (ಸಿಡಿಸಿ) ರದ್ದುಗೊಳಿಸಿ, ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಮಂಡಳಿ ಅಥವಾ ಅಭಿವೃದ್ಧಿ ನಿಗಮವನ್ನು ಮತ್ತು 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕವಾದ ಮೀಸಲಾತಿಯನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡಬೇಕೆಂದು ಜನಶಕ್ತಿ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.

ಜನಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಡೈನಾಮಿಕ್ ಲೀಡರ್ ಪತ್ರಿಕೆಯ ಸಂಪಾದಕ ಡಿ.ಸಿ.ಪ್ರಕಾಶ್ ನಮ್ಮೊಂದಿಗೆ ಮಾತನಾಡುತ್ತಾ: “ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕ್ರೈಸ್ತರ ಮೇಲೆ ತೋರಿಸಿದ ಅತಿಯಾದ ಪ್ರೀತಿ, ವಿಶ್ವಾಸ, ಅನುಕಂಪ ಹಾಗೂ ಕ್ರೈಸ್ತ ಸಂಘಟನೆಗಳು ನಿರಂತರವಾಗಿ ಮಾಡಿಬಂದ ಹೋರಾಟಕ್ಕೆ ಮಣಿದು 2010ರಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಸಮಿತಿಯನ್ನು ರಚಿಸಿ ರೂ.50 ಕೋಟಿಯನ್ನು ಅನುದಾನವಾಗಿ ಬಿಡುಗಡೆ ಮಾಡಿ, ಕ್ರೈಸ್ತರ ಏಳಿಗೆಗೆ ಮುನ್ನುಡಿ ಬರೆದರು. ಮುಂದುವರಿದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಸಂಪ್ರದಾಯವನ್ನು ಮುಂದುವರಿಸಿ ಅನುದಾನವನ್ನು ಹೆಚ್ಚು ಮಾಡುತ್ತಾ ಕ್ರೈಸ್ತರ ಬಾಳಿಗೆ ಬೆಳಕಾದರು.

ಆದರೂ ಇದು ಅತಿ ಕಡಿಮೆಯ ಅನುದಾನವಾಗಿದೆ. ಸುಮಾರು ಶೇ.4% ರಷ್ಟಿರುವ ಕ್ರೈಸ್ತ ಸಮುದಾಯಕ್ಕೆ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಬಡ ಕ್ರೈಸ್ತರು ಸ್ವಾವಲಂಬಿಗಳಾಗಬೇಕಾದರೆ, ಅವರಿಗೆ ಪ್ರತ್ಯೇಕವಾದ ನಿಗಮ ಅಥವಾ ಮಂಡಳಿ ರಚನೆಯಾದರೆ ಮಾತ್ರ ಅದು ಸಾದ್ಯವಾಗುತ್ತದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಕ್ರೈಸ್ತ ಸಮುದಾಯ ಅಭಿವೃದ್ಧಿ ಪಡೆಯಬೇಕಾದರೆ, 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕವಾದ ಮೀಸಲಾತಿಯನ್ನು ಸರ್ಕಾರ ಘೋಷಣೆ ಮಾಡಬೇಕಾಗಿದೆ.

ಈ ಏರಡು ಪ್ರಮುಖವಾದ ಬೇಡಿಕೆಗಳನ್ನು ನಾವು ಇಂದು ಸರ್ಕಾರದ ಮುಂದಿಟ್ಟಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಮೇಲ್ಕಂಡ ಎರಡು ಬೇಡಿಕೆಗಳಿಗೆ ಸ್ಪಂದಿಸಿ, ಮುಂಬರುವ 2023ರ ಬಜೆಟ್ ಅಧಿವೇಶನದಲ್ಲಿ ಇದರ ಬಗ್ಗೆ ಘೋಷನೆ ಮಾಡುತ್ತಾರೆ ಎಂದು ನಂಬಿದ್ದೇವೆ” ಎಂದು ಹೇಳಿದರು.      

Related Posts