ಗಂಗಾಧರ ನಾಗೇಶ್ ಭಟ್ಟರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ - ಮಹೇಶ್ ಶೇಟ್ » Dynamic Leader
December 4, 2024
ಬೆಂಗಳೂರು ರಾಜಕೀಯ ರಾಜ್ಯ

ಗಂಗಾಧರ ನಾಗೇಶ್ ಭಟ್ಟರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ – ಮಹೇಶ್ ಶೇಟ್

ಮಂಜುಳಾ ರೆಡ್ಡಿ, ವರದಿಗಾರರು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾರವಾರದ ಅಂಕೋಲಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗಂಗಾಧರ ನಾಗೇಶ ಭಟ್ಟರನ್ನು ಪರಿಗಣಿಸಬೇಕೆಂದು ದೈವಜ್ಞ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಮಹೇಶ್ ಶೇಟ್ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಿಜೆಪಿಯನ್ನು ಒತ್ತಾಯಿಸಿದರು.

‘ಬೆಂಗಳೂರು ದೈವಜ್ಞ ಯುವಕ ಸಂಘದ ಅಧ್ಯಕ್ಷ ಮಹೇಶ್ ಶೇಟ್, ದೈವಜ್ಞ ಬ್ರಾಹ್ಮಣರು ತಮ್ಮ ಸಾಧನೆಯ ಮೂಲಕ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ದೈವಜ್ಞ ಬ್ರಾಹ್ಮಣ ಸಮಾಜದವರು ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಕೇಂದ್ರದ ಒಬಿಸಿ ಮತ್ತು ರಾಜ್ಯದ 2 ಎ ಪಂಗಡದಲ್ಲಿ ನಮ್ಮ ಸಮಾಜವನ್ನು ಸೇರಿಸಿರುತ್ತಾರೆ. ಇಲ್ಲಿಯವರಗೆ ಯಾವುದೇ ರಾಜಕೀಯ ಪಕ್ಷಗಳು ಹಾಗೂ ನಮ್ಮನ್ನು ಆಳಿದ ಸರ್ಕಾರಗಳು ದೈವಜ್ಞ ಸಮಾಜಕ್ಕೆ ಹೇಳಿಕೊಳ್ಳುವಂತಹ ಯಾವುದೇ ಸ್ಥಾನಮಾನಗಳನ್ನು ನೀಡಿಲ್ಲ.

ದೈವಜ್ಞ ಬ್ರಾಹ್ಮಣರು ಜನಸಂಘ ಕಾಲದಿಂದಲೂ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿರುತ್ತಾರೆ. ದೈವಜ್ಞ ಬ್ರಾಹ್ಮಣರು ಕಾರಣಿಭೂತರಾಗಿರುವುದು ರಾಜಕೀಯ ಪಕ್ಷಗಳಿಗೆ ಗೊತ್ತಿರುವ ವಿಚಾರವೇ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಬೆಂಗಳೂರಿನ ಅನೇಕ ಮತ ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದೈವಜ್ಞರು ಪ್ರಭಾವಶಾಲಿಗಳಾಗಿದ್ದಾರೆ. ಅದರ ಲಾಭವನ್ನು ಬಿಜೆಪಿ ಪಕ್ಷವು ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಬೇಡಿಕೆಯಾಗಿದೆ.

ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೈವಜ್ಞ ಬ್ರಾಹ್ಮಣ ಸಮುದಾಯದವರಾದ ಗಂಗಾಧರ ಭಟ್ಟರನ್ನು ಉತ್ತರ ಕನ್ನಡ ಭಾಗದ ಕಾರವಾರ ಅಂಕೋಲಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಒಕ್ಕೂಟವು ತೀರ್ಮಾನಿಸಿದೆ. ಮತ್ತು ಅವರಿಗೆ ತನು, ಮನ, ಧನ ನೀಡುವ ನಿರ್ಧಾರವನ್ನೂ ತೆಗೆದುಕೊಂಡಿದೆ. ಅದಕ್ಕೆ ಬಿಜೆಪಿ ಪಕ್ಷವು ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಬೇಕೆಂದು ಕರ್ನಾಟಕ ರಾಜ್ಯದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಒಕ್ಕೂಟವು ಆಗ್ರಹಿಸುತ್ತಿದೆ’ ಎಂದು ಪತ್ರಿಕಾ ಗೋಷ್ಠಿಯಲ್ಲಿ ದೈವಜ್ಞ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಮಹೇಶ್ ಶೇಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉದಯ ರಾಯಕಾರ್, ಮೋಹನ್ ಪಲಕರ್, ಪ್ರೇಮ ಮೂರ್ತಿ, ವಿವೇಕಾನಂದ ಬೈಕೇನಿಕರ್ ಮುಂತಾದವರು ಇದ್ದರು. 

Related Posts