ಅತ್ಯಾಚಾರ ನಡೆದಿಲ್ಲ! ಹಾಗಾದರೆ ನಡೆದಿದ್ದು ಏನು? ಬಲಿಪಶು ಶಿವಮೂರ್ತಿ ಶರಣರೆ? ಸಂತ್ರಸ್ತ ಬಾಲಕಿಯರೆ? » Dynamic Leader
December 13, 2024
ರಾಜ್ಯ

ಅತ್ಯಾಚಾರ ನಡೆದಿಲ್ಲ! ಹಾಗಾದರೆ ನಡೆದಿದ್ದು ಏನು? ಬಲಿಪಶು ಶಿವಮೂರ್ತಿ ಶರಣರೆ? ಸಂತ್ರಸ್ತ ಬಾಲಕಿಯರೆ?

ಡಿ.ಸಿ.ಪ್ರಕಾಶ್, ಸಂಪಾದಕರು

‘ಅಪ್ರಾಪ್ತ ವಿಧ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಿತ್ರದುರ್ಗದ ಶ್ರೀ.ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ’ ಎಂಬ ವಿಷಯ ತಿಳಿದು, ಅಘಾತಕ್ಕೆ ಒಳಗಾದ ಕರ್ನಾಟಕದ ಜನತೆ ‘ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿಲ್ಲ’ ಎಂಬ ಸುದ್ಧಿಯನ್ನು ಕೇಳಿ ಮೊತ್ತೊಮ್ಮೆ ಅಘಾತಕ್ಕೆ ಈಡಾಗಿದ್ದಾರೆ.

‘ಚಿತ್ರದುರ್ಗದ ಮುರಘಾ ಮಠದ ವಿಧ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು’. ಎಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಮೂಲಕ ದೂರನ್ನು ದಾಖಲಿಸಿದ್ದರು.

ಅಲ್ಲದೇ ಇಂತಹ ಅನುಭವ ಹಲವು ವಿಧ್ಯಾರ್ಥಿನಿಯರಿಗೆ ಆಗಿದ್ದರೂ ಸಹ ದೂರು ನೀಡಲು ಹೆದರುತ್ತಿದ್ದರು. ನಮಗೆ ಚಿತ್ರದುರ್ಗದಲ್ಲಿ ನ್ಯಾಯ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದೇವೆ’ ಎಂದು ವಿಧ್ಯಾರ್ಥಿನಿಯರು ಹೇಳಿಕೊಂಡಿದ್ದರು. ನಂತರ ಮೈಸೂರಿನಿಂದ ಚಿತ್ರದುರ್ಗಕ್ಕೆ ಬಂದಿದ್ದ ಸಂತ್ರಸ್ತ ಬಾಲಕಿಯರು ಚಿತ್ರದುರ್ಗ ಜಿಲ್ಲಾ ಕೋರ್ಟ್ ಜಡ್ಜ್ ಎದುರು ಸಿ.ಆರ್.ಪಿ.ಸಿ. 164 ರಡಿಯಲ್ಲಿ ಹೇಳಿಕೆಯನ್ನೂ ದಾಖಲು ಮಾಡಿದ್ದರು. ಸ್ವಾಮೀಜಿಗಳು ಬಂಧನವಾಗಿ ಜೈಲು ಸೇರಿಕೊಂಡು ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾದರು. ನಂತರ ಡಿಸ್ಚಾರ್ಜ್ ಆಗಿ ಮತ್ತೆ ಜೈಲು ಸೇರಿಕೊಂಡಿದ್ದೆಲ್ಲವೂ ಅಭಿಮಾನಿಗಳಿಗೆ ಮತ್ತು ಭಕ್ತಕೋಟಿಗಳಿಗೆ ಅಘಾತವೇ ತಂದಿತ್ತು.

ಮತ್ತೊಂದುಕಡೆ ಸಂತ್ರಸ್ತ ಬಾಲಕೀಯ ಪರವಾಗಿ ನಿಂತ ಸಂಘಟನೆಗಳು ಸ್ವಾಮೀಜಿಗಳನ್ನು ಬಂಧಿಸುವಂತೆ  ಪ್ರತಿಭಟನೆಗಳನ್ನು ಮಾಡಿದವು. ಮುರುಘಾ ಶ್ರೀಗಳ ಮೇಲೆ ಎರಡು ಪೋಕ್ಸೊ ಪ್ರಕರಣಗಳು ದಾಖಲಾದವು. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಎರಡನೇ ಪೋಕ್ಸೊ ಪ್ರಕರಣ ದಾಖಲಿಸಲು ಸಂತ್ರಸ್ತರೊಬ್ಬರ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಅಥಣಿಯ ಶಿಕ್ಷಕ ಬಸವರಾಜೇಂದ್ರ ಅವರನ್ನು ಜಿಲ್ಲಾ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಕೇಸ್‌ನಲ್ಲಿ ಬಸವರಾಜನ್ ದಂಪತಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮುಂದಿನ ದಿನಗಳಲ್ಲಿ ಮುರುಘಾ ಶರಣರನ್ನು ಕೂಡ ನಿರಪರಾಧಿ ಎಂದು ಹೇಳಿ ಅವರನ್ನೂ ಕೋರ್ಟ್ ಬಿಡುಗಡೆ ಮಾಡಬಹುದು. ಒಂದು ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಜಿಲ್ಲಾಸ್ಪತ್ರೆ ಹೇಳುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಎರಡನೇ ಪೋಕ್ಸೊ ಪ್ರಕರಣ ದಾಖಲಿಸಲು ಸಂತ್ರಸ್ತರೊಬ್ಬರ ಮೇಲೆ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಮತ್ತು ಇತರರು ಪ್ರಭಾವ ಬೀರಿದ್ದಾರೆ ಎಂದೂ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೇ ಈ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರಪರಾಧಿ? ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗಿತ್ತು? ಇತ್ಯಾದಿಗಳು. ನಿಜವಾಗಿಯೂ ಮುರುಘಾ ಶರಣರು ನಿರಪರಾಧಿ ಎಂದು ತೀರ್ಪು ಪ್ರಕಟವಾದರೆ, ಚಿತ್ರದುರ್ಗದ ಶ್ರೀ.ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠದ ಮೇಲಿನ ಕಳಂಕ ನಿವಾರಣೆಯಾಗುತ್ತದೆ. ಅವರ ಅಭಿಮಾನಿಗಳಿಗೆ ಮತ್ತು ಭಕ್ತಕೋಟಿಗಳಿಗೆ ಶಿವಮೂರ್ತಿ ಮುರುಘಾ ಶರಣರ ಮೇಲೆ ಇನ್ನು ಹೆಚ್ಚಾಗಿ ಪ್ರೀತಿ, ಭಕ್ತಿ, ಶ್ರದ್ಧೆ, ಗೌರವ ಎಲ್ಲವೂ ಹೆಚ್ಚಾಗುತ್ತದೆ.

ಅದೇ ಸಂದರ್ಭದಲ್ಲಿ ಯಾರಿಗೋ ನಂಬಿ, ಅವರ ಒತ್ತಡಕ್ಕೆ ಮಣಿದ ಸಂತ್ರಸ್ತ ವಿಧ್ಯಾರ್ಥಿನಿಯರ ಮುಂದಿನ ಭವಿಷ್ಯವೇನು? ಮುರುಘಾ ಶ್ರೀಗಳ ವಿರುದ್ಧ ಷಡ್ಯಂತ್ರ ರೂಪಿಸಲು ಕಾರಣರಾದ ಒಡನಾಡಿ ಸಂಸ್ಥೆಯ ಮುಖ್ಯಸ್ತರು ಮತ್ತು ಈ ಅಕ್ರಮ ಜಾಲದ ಹಿಂದೆ ಅಡಗಿ ಕುಳಿತಿರುವ (ಕಿಂಗ್‌ಫಿನ್) ಪ್ರಭಾವಿಗಳ ಮೇಲಿನ ಕ್ರಮ ಯಾವುದು? ಇವೆಲ್ಲವೂ ಕೂಡ ತೀರ್ಮಾನವಾಗಬೇಕು.

ಪೋಕ್ಸೊ ಪ್ರಕರಣಗಳಲ್ಲಿ ಜಾಮೀನು ಸಿಗುವುದು ಕಷ್ಟ. ಅರೋಪಿಯನ್ನು ಅಪರಾಧಿ ಎಂದೇ ಪರಿಗಣಿಸಿ ನ್ಯಾಯಾಲಯ ಜೈಲಿಗೆ ಕಳುಹಿಸಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಮಠಗಳು ತಮ್ಮ ರಾಜಕೀಯ ಪ್ರಭಾವ ಬಳಸಿ, ಶಿವಮೂರ್ತಿ ಶರಣರಿಗೆ ಜಾಮೀನು ಸಿಗಲು ಇಂತಹ ಹುನ್ನಾರಗಳನ್ನು ಮಾಡುತ್ತಿದೆ ಎಂಬ ಮಾತುಗಳು ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ.

ಸಂತ್ರಸ್ತ ಹುಡುಗಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ನೀಡಿರುವ ವೈದ್ಯಕೀಯ ವರದಿಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಮತ್ತು ಮರು ಪರೀಕ್ಷೆ ನಡೆಸುವಂತೆ ಕೋರುವ ಎಲ್ಲಾ ಅವಕಾಶಗಳು ಸಂತ್ರಸ್ತರಿಗೆ ಮುಕ್ತವಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಈ ಪ್ರಕರಣದಲ್ಲಿ ಬಲಿಪಶು ಆಗಿರುವುದು ಶಿವಮೂರ್ತಿ ಶರಣರೆ? ಅಥವಾ ಸಂತ್ರಸ್ತ ಬಾಲಕಿಯರೆ? ಇಂತಹ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗಬೇಕೆಂದರೆ ಸರ್ಕಾರ ಕೂಡಲೇ ಈ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರಿಗೆ ವಹಿಸಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಬೇಕು. ಆಗ ಮಾತ್ರ ಸತ್ಯ ಹೊರಬರಲು ಸಾದ್ಯ.

Related Posts